ನವದೆಹಲಿ: ಜಗ್ಗಿ ವಾಸುದೇವ ಅವರ ‘ಈಶಾ ಫೌಂಡೇಷನ್’ ವಿರುದ್ಧ ಮುಂದಿನ ಕ್ರಮ ಜರುಗಿಸಬಾರದು ಎಂದು ತಮಿಳುನಾಡು ಪೊಲೀಸರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚನೆ ನೀಡಿದೆ.
ಇಬ್ಬರು ಹೆಣ್ಣುಮಕ್ಕಳನ್ನು ‘ಈಶಾ ಫೌಂಡೇಷನ್’ನ ಆಶ್ರಮದಲ್ಲಿ ಬಲವಂತವಾಗಿ ಇರಿಸಿಕೊಳ್ಳಲಾಗಿದೆ ಎಂಬ ದೂರಿನ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿತ್ತು.
ಮದ್ರಾಸ್ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತನ್ನಲ್ಲಿಗೆ ವರ್ಗಾಯಿಸಿಕೊಂಡಿದೆ. ತನ್ನ ಇಬ್ಬರು ಹೆಣ್ಣುಮಕ್ಕಳನ್ನು ‘ಈಶಾ ಫೌಂಡೇಷನ್’ ಆಶ್ರಮದಲ್ಲಿ ಒತ್ತಾಯಪೂರ್ವಕವಾಗಿ ಇರಿಸಿಕೊಂಡಿದೆ ಎಂದು ವ್ಯಕ್ತಿಯೊಬ್ಬರು ಈ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ‘ಪೊಲೀಸ್ ಪಡೆಯನ್ನು ಇಂತಹ ಸಂಸ್ಥೆಗಳಿಗೆ ಬಿಟ್ಟುಕೊಳ್ಳಲು ಆಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ.
‘ಈಶಾ ಫೌಂಡೇಷನ್’ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ವಿವರ ಸಂಗ್ರಹಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಸೂಚನೆಯನ್ನು ಪ್ರಶ್ನಿಸಿ ‘ಈಶಾ ಫೌಂಡೇಷನ್’ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅದು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ನಡೆಸಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿದ್ದಾರೆ.
ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 30ರ ಆದೇಶದಲ್ಲಿ ಸೂಚಿಸಿರುವಂತೆ ವಸ್ತುಸ್ಥಿತಿ ವರದಿಯನ್ನು ಪೊಲೀಸರು ತನಗೆ ಸಲ್ಲಿಸಬೇಕು ಎಂದು ಪೀಠವು ಹೇಳಿದೆ. ಈಶಾ ಫೌಂಡೇಷನ್ ಪರವಾಗಿ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಅಂದಾಜು 150 ಪೊಲೀಸರು ಆಶ್ರಮ ಪ್ರವೇಶಿಸಿದ್ದಾರೆ, ಅವರು ಪ್ರತಿ ಮೂಲೆಯನ್ನೂ ತಪಾಸಣೆಗೆ ಒಳಪಡಿಸಿದ್ದಾರೆ ಎಂದು ಹೇಳಿದರು.
ಇಬ್ಬರು ಹೆಣ್ಣುಮಕ್ಕಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಪೀಠವು, ತಾವು ಆಶ್ರಮದಲ್ಲಿ ಸ್ವಇಚ್ಛೆಯಿಂದ ವಾಸಿಸುತ್ತಿರುವುದಾಗಿ ಅವರು ಹೇಳಿರುವುದನ್ನು ದಾಖಲಿಸಿಕೊಂಡಿತು. ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಲಾಗಿದೆ.
ಆಶ್ರಮವನ್ನು ಸೇರಿದಾಗ ಒಬ್ಬ ಮಹಿಳೆಗೆ 24 ವರ್ಷ ವಯಸ್ಸಾಗಿತ್ತು, ಇನ್ನೊಬ್ಬ ಮಹಿಳೆಗೆ 27 ವರ್ಷ ವಯಸ್ಸಾಗಿತ್ತು ಎಂಬುದನ್ನು ಪೀಠಕ್ಕೆ ತಿಳಿಸಲಾಯಿತು. ತಮಗೆ ಆಶ್ರಮದಿಂದ ಹೊರಗಡೆ ಹೋಗಲು ಮುಕ್ತ ಅವಕಾಶ ಇದೆ, ತಮ್ಮನ್ನು ಪಾಲಕರು ಆಶ್ರಮಕ್ಕೆ ಬಂದು ಭೇಟಿ ಆಗಿದ್ದಾರೆ ಎಂದು ಇಬ್ಬರು ಹೆಣ್ಣುಮಕ್ಕಳು ಹೇಳಿರುವುದನ್ನು ಪೀಠವು ದಾಖಲಿಸಿಕೊಂಡಿದೆ.
ಈ ಇಬ್ಬರ ತಾಯಿಯು ಸರಿಸುಮಾರು ಎಂಟು ವರ್ಷಗಳ ಹಿಂದೆ ಇದೇ ಬಗೆಯ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ತಂದೆ ಕೂಡ ಕೋರ್ಟ್‌ಗೆ ಹಾಜರಾಗಿದ್ದರು ಎಂಬುದನ್ನು ಕೂಡ ಪೀಠವು ದಾಖಲು ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.