ADVERTISEMENT

ದೆಹಲಿಯಲ್ಲಿ ವಾಯು ಮಾಲಿನ್ಯ: ಎರಡು ದಿನ ಲಾಕ್‌ಡೌನ್ ಘೋಷಿಸುವಂತೆ ‘ಸುಪ್ರೀಂ’ ಸಲಹೆ

ಪಿಟಿಐ
Published 13 ನವೆಂಬರ್ 2021, 8:29 IST
Last Updated 13 ನವೆಂಬರ್ 2021, 8:29 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದ್ದು, ಗಾಳಿಯ ಗುಣಮಟ್ಟ ಸುಧಾರಿಸಲು ಅಗತ್ಯವಿದ್ದಲ್ಲಿ ನಗರದಲ್ಲಿ ಎರಡು ದಿನ ಲಾಕ್‌ಡೌನ್‌ ಘೋಷಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶನಿವಾರ ಸಲಹೆ ನೀಡಿದೆ.

ಲಾಕ್‌ಡೌನ್‌ ಜಾರಿಗೊಳಿಸುವ ಎರಡು ದಿನ ನಗರದಲ್ಲಿ ವಾಹನಗಳ ಸಂಚಾರ, ಬೆಳೆ ತ್ಯಾಜ್ಯ ಸುಡುವುದು, ಕೈಗಾರಿಕೆಗಳು, ಪಟಾಕಿ ಬಳಕೆಯ ಮೇಲೆ ನಿಷೇಧ ವಿಧಿಸುವುದರಿಂದ ಸ್ವಲ್ಪಮಟ್ಟಿಗೆ ಗಾಳಿಯ ಗುಣಮಟ್ಟ ಸುಧಾರಿಸಬಹುದೆಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

‘ಬೆಳೆ ತ್ಯಾಜ್ಯ ಸುಡುವುದು ಶೇ 25ರಷ್ಟು ಮಾಲಿನ್ಯಕ್ಕೆ ಕಾರಣವಾಗಿದ್ದು, ಉಳಿದ ಶೇ 75ರಷ್ಟು ಮಾಲಿನ್ಯ ಪಟಾಕಿ ಸುಡುವುದು, ವಾಹನಗಳಿಂದ ಹೊರಹೊಮ್ಮುವ ಹೊಗೆ ಮತ್ತು ಧೂಳಿನಿಂದ ಆಗುತ್ತಿದೆ’ ಎಂದು ರಮಣ ಹೇಳಿದರು.

ADVERTISEMENT

‘ಸದ್ಯ ದೆಹಲಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಮನೆಯಲ್ಲಿ ಮಾಸ್ಕ್‌ ಧರಿಸುತ್ತಿದ್ದೇವೆ. ಇದು ಅತ್ಯಂತ ಕೆಟ್ಟ ಪರಿಸ್ಥಿತಿ’ ಎಂದು ಎನ್‌.ವಿ.ರಮಣ ಅವರು ಕೇಂದ್ರದ ಪ್ರತಿನಿಧಿ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ವಿವರಿಸಿದರು.

ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟುವುದು ಹೇಗೆ?, ಲಾಕ್‌ಡೌನ್‌ ಒಂದೇ ಪರಿಹಾರವೇ? ಜನರು ಬದುಕುವುದು ಹೇಗೆ? ಎಂದು ಮೆಹ್ತಾ ಅವರನ್ನು ಪ್ರಶ್ನಿಸಿದ್ದಾರೆ.

ವಾಯು ಮಾಲಿನ್ಯ ನಿಯಂತ್ರಿಸಲು ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆ ರೈತರಿಗೆ ಸೂಚಿಸಲಾಗಿದೆ ಎಂದು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತುಷಾರ್‌ ಮೆಹ್ತಾ ವಿವರಿಸಿದರು.

ಇದೇ ವೇಳೆ ಮಾತನಾಡಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮಾತನಾಡಿ, ‘ರೈತರನ್ನು ದೂಷಿಸುವ ಬದಲು ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ವಾಯು ಮಾಲಿನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.