ನವದೆಹಲಿ: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ವಿಶೇಷ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
11 ಅಪರಾಧಿಗಳ ಬಿಡುಗಡೆ ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಬಿಲ್ಕಿಸ್ ಬಾನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಪಿ.ಎಸ್.ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರು ವಿಶೇಷ ಪೀಠ ರಚನೆ ಮಾಡಿ ವಿಚಾರಣೆ ನಡೆಸುವುದಾಗಿ ಬಿಲ್ಕಿಸ್ ಬಾನು ವಕೀಲೆ ಶೋಭಾ ಗುಪ್ತಾ ಅವರಿಗೆ ಹೇಳಿದರು.
ಬುಧವಾರ ಸಂಜೆಯೇ ಪೀಠ ರಚನೆಯ ಬಗ್ಗೆ ತಿಳಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಮತ್ತು ಅವರ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಸಾಮೂಹಿಕ ಅತ್ಯಾಚಾರ ನಡೆದಾಗ ಬಿಲ್ಕಿಸ್ ಅವರಿಗೆ 21 ವರ್ಷ ವಯಸ್ಸಾಗಿತ್ತು. ಆಗ ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಹತ್ಯೆಯಾದ ಏಳು ಮಂದಿಯಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳೂ ಸೇರಿದ್ದಾಳೆ.
ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳು ಶಿಕ್ಷೆ ಪೂರ್ಣಗೊಳಿಸುವ ಮೊದಲೇ ಬಿಡುಗಡೆ ಮಾಡಿದ ಗುಜರಾತ್ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಗುಜರಾತ್ ಸರ್ಕಾರ ಎಲ್ಲ 11 ಅಪರಾಧಿಗಳಿಗೆ ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಲು 2022ರ ಆಗಸ್ಟ್ 10ರಂದು ನಿರ್ಧರಿಸಿತು. ಆಗಸ್ಟ್ 15ರ 76ನೇ ಸ್ವಾತಂತ್ರ್ಯೋತ್ಸವದಂದು ಗೋಧ್ರಾ ಉಪ ಬಂದೀಖಾನೆಯಿಂದ ಬಿಡುಗಡೆ ಮಾಡಿತ್ತು. ಅಪರಾಧಿಗಳು 15 ವರ್ಷಗಳಿಗೂ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದರು.
ಅಪರಾಧಿಗಳು ಬಿಲ್ಕಿಸ್ ಅವರ ಮೂರೂವರೇ ವರ್ಷದ ಮಗಳು ಮತ್ತು ಕುಟುಂಬದ ಏಳು ಜನರನ್ನು ಹತ್ಯೆ ಮಾಡಿದ್ದ ಆಪಾದನೆಯೂ ಸಾಬೀತಾಗಿ ಶಿಕ್ಷೆ ಅನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.