ನವದೆಹಲಿ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ–2004ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಇದು ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂಬ ಕಾರಣ ನೀಡಿ ಕಾಯ್ದೆಯನ್ನು ರದ್ದು ಮಾಡಿ ಮಾರ್ಚ್ 22ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.
‘ಈ ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂಬ ಹೈಕೋರ್ಟ್‌ನ ನಿಲುವು ದೋಷದಿಂದ ಕೂಡಿದೆ’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿದ್ದರು.
ತೀರ್ಪನ್ನು ಓದಿದ ಸಿಜೆಐ ಚಂದ್ರಚೂಡ್, ‘ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆಯ ಸಿಂಧುತ್ವವನ್ನು ನಾವು ಎತ್ತಿ ಹಿಡಿಯುತ್ತೇವೆ. ಸರ್ಕಾರಕ್ಕೆ ಶಾಸನಬದ್ಧ ಅಧಿಕಾರ ಇಲ್ಲದಿದ್ದಾಗ ಮಾತ್ರ ಇಂತಹ ಕಾಯ್ದೆಯನ್ನು ರದ್ದುಗೊಳಿಸಬಹುದು’ ಎಂದರು.
ಮದರಸಾಗಳನ್ನು ಮುಚ್ಚಿ, ಅಲ್ಲಿರುವ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಈಗ, ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಉತ್ತರ ಪ್ರದೇಶದ ಮದರಸಾಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.
ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್, ಅಕ್ಟೋಬರ್ 22ರಂದು ತನ್ನ ತೀರ್ಪು ಕಾಯ್ದಿರಿಸಿತ್ತು.
ಅಂಜುಮ್ ಖಾದ್ರಿ ಹಾಗೂ ಇತರರು ಈ ಕುರಿತು ಮೇಲ್ಮನವಿ ಸಲ್ಲಿಸಿದ್ದರು.
ಉತ್ತರ ಪ್ರದೇಶದಲ್ಲಿ 16 ಸಾವಿರಕ್ಕೂ ಅಧಿಕ ಮದರಸಾಗಳಿವೆ ಮದರಸಾಗಳಲ್ಲಿ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ
ಸರ್ಕಾರಕ್ಕೆ ಮದರಸಾಗಳಲ್ಲಿ ಸುಧಾರಣೆ ತರಬೇಕು ಎಂಬ ಉದ್ದೇಶ ಇದ್ದಲ್ಲಿ ಅದು ಸಂಬಂಧಿಸಿದ ಭಾಗೀದಾರರೊಂದಿಗೆ ಚರ್ಚೆ ನಡೆಸಿ, ಕ್ರಮ ತೆಗೆದುಕೊಳ್ಳಲಿ. ಈ ತೀರ್ಪು ಸಂವಿಧಾನದ ಆಶಯವನ್ನು ರಕ್ಷಿಸಿದೆ. ಯಾವುದೇ ಅಸಾಂವಿಧಾನಿಕ ನಿರ್ಧಾರ ಕೈಗೊಂಡಲ್ಲಿ ಕಾನೂನು ಹೋರಾಟ ನಡೆಸಲಾಗುವುದು
-ಮೌಲಾನಾ ಕಬ್ ರಶಿದಿ, ಜಮೀಯತ್ ಉಲೇಮಾ–ಎ–ಹಿಂದ್‌ನ ಕಾನೂನು ಸಲಹೆಗಾರ
ಸರ್ಕಾರ ರೂಪಿಸಿರುವ ಕಾಯ್ದೆಯೊಂದು ಅಸಾಂವಿಧಾನಿಕವಾಗಿರಲು ಹೇಗೆ ಸಾಧ್ಯ? ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮದರಸಾಗಳು ಈಗ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಕಾರ್ಯನಿರ್ವಹಿಸಬಹುದು
- ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಿರಿಯ ಸದಸ್ಯ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮದರಸಾಗಳು ಮಹತ್ವದ ಪಾತ್ರ ವಹಿಸಿದ್ದವು. ಮದರಸಾಗಳನ್ನು ಸಂಶಯದಿಂದ ನೋಡುವುದು ಸರಿಯಲ್ಲ. ಇವು ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ಸಚಿವರನ್ನು ರೂಪಿಸಿವೆ. ‘ಸುಪ್ರೀಂ’ ತೀರ್ಪು ಕಾಯ್ದೆಯನ್ನು ಸಮರ್ಥಿಸಿದೆ
- ಮೌಲಾನಾ ಯಾಸೂಬ್ ಅಬ್ಬಾಸ್, ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ವಕ್ತಾರ
ಮದರಸಾಗಳ ಭವಿಷ್ಯ ಕುರಿತು ಸೃಷ್ಟಿಯಾಗಿದ್ದ ಅನಿಶ್ಚಿತತೆಗೆ ಸುಪ್ರೀಂ ಕೋರ್ಟ್ ತೀರ್ಪು ಅಂತ್ಯಹಾಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮುಖ್ಯ
- ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಸ್ವಾತಂತ್ರ್ಯದ ನಂತರ ಕಾನೂನು ಪ್ರಕಾರವೇ ಮದರಸಾಗಳನ್ನು ಸ್ಥಾಪಿಸಲಾಗಿದೆ. ಆಡಳಿತಾರೂಢ ಬಿಜೆಪಿ ಮುಸ್ಲಿಮರನ್ನು ಅವರ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಲು ಬಯಸಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿದ್ದು, ದ್ವೇಷದ ರಾಜಕೀಯ ಮಾಡುತ್ತಿದೆ
- ಫಖ್ರುಲ್ ಹಸನ್, ಸಮಾಜವಾದಿ ಪಕ್ಷದ ವಕ್ತಾರ
ಜಾತ್ಯತೀತ ತತ್ವಗಳ ಆಧಾರದ ಮೇಲೆ ಕಾಯ್ದೆಯೊಂದನ್ನು ರದ್ದುಗೊಳಿಸಲು ಸಾಧ್ಯವಿಲ್ಲ
ಕಾಯ್ದೆಯೊಂದು ಶಾಸನಬದ್ಧವಾಗಿ ರೂಪಿಸಿರ ದಿದ್ದಲ್ಲಿ ಅಥವಾ ಜನರ ಮೂಲಭೂತ ಹಕ್ಕುಗಳು ಇಲ್ಲವೇ ಸಂವಿಧಾನದ ಇತರ ಅವಕಾಶಗಳನ್ನು ಉಲ್ಲಂಘಿಸುತ್ತಿದ್ದಲ್ಲಿ ಅಂತಹ ಕಾಯ್ದೆಯನ್ನು ಕಾನೂನುಬಾಹಿರ ಎಂದು ಘೋಷಿಸಬಹುದು
ಮದರಸಾ ಕಾಯ್ದೆಯು (ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ, 2004) ರಾಜ್ಯವು ಶಾಸನಬದ್ಧವಾಗಿಯೇ ರೂಪಿಸಿದ ಕಾಯ್ದೆಯಾಗಿದೆ. ಪಟ್ಟಿ 3ರಲ್ಲಿ ಉಲ್ಲೇಖಗೊಂಡಿದೆ.
ಪದವಿ (ಫಾಜಿಲ್) ಹಾಗೂ ಸ್ನಾತಕೋತ್ತರ (ಕಾಮಿಲ್) ಕೋರ್ಸ್‌ಗಳು ಸೇರಿದಂತೆ ಉನ್ನತ ಶಿಕ್ಷಣದ ಮೇಲೆ ನಿಯಂತ್ರಣ ಹೊಂದುವ ಅವಕಾಶಗಳನ್ನು ಕೂಡ ಈ ಕಾಯ್ದೆ ಒಳಗೊಂಡಿದೆ. ಆದರೆ, ಉನ್ನತ ಶಿಕ್ಷಣವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಂತ್ರಿಸುತ್ತದೆ. ಹೀಗಾಗಿ, ಮದರಸಾ ಕಾಯ್ದೆಯಲ್ಲಿನ ಈ ಅವಕಾಶಗಳು ಅಸಾಂವಿಧಾನಿಕ
ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತ ಶಿಕ್ಷಣ ನೀಡುವುದನ್ನು ಖಾತ್ರಿಪಡಿಸುವ ಸಂಬಂಧ ಸರ್ಕಾರ ನಿಯಮ ಗಳನ್ನು ರೂಪಿಸಬಹುದು. ಈ ನಿಯಮಗಳು ಅವರ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಾಶ ಮಾಡುವಂತಿರಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.