ನವದೆಹಲಿ: ಅಪರಾಧ ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಪೊಲೀಸರು ವಿವರಣೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಸಮಗ್ರ ಕೈಪಿಡಿಯನ್ನು ಸಿದ್ಧಪಡಿಸಬೇಕಿದೆ ಎಂದು ಸುಪ್ರೀಂ ಕೋರ್ಟ್, ಬುಧವಾರ ನಿರ್ದೇಶನ ನೀಡಿದೆ.
ಯಾವುದೇ ಪ್ರಕರಣವು ತನಿಖೆಯ ಹಂತದಲ್ಲಿ ಇರುವಾಗ ಆ ಕುರಿತು ಪೊಲೀಸರು ಮಾಧ್ಯಮಗಳಿಗೆ ನೀಡುವ ವಿವರಣೆ ಕುರಿತು ಒಂದು ಮಾದರಿ ವ್ಯವಸ್ಥೆ ರೂಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ನಡೆಸಿತು.
ಪೊಲೀಸರು ನೀಡುವ ಪೂರ್ವಗ್ರಹಪೀಡಿತ ವರದಿಗಳು ನಾಗರಿಕರಲ್ಲಿ ಸಂಶಯಕ್ಕೆ ಎಡೆಮಾಡಿಕೊಡುತ್ತವೆ ಎಂಬುದನ್ನು ಗಮನಿಸಿದ ನ್ಯಾಯಪೀಠವು, ‘ಮಾಧ್ಯಮಗಳಲ್ಲಿ ಪ್ರಕಟವಾಗುವ ಪಕ್ಷಪಾತಿ ವರದಿಗಳು ಸಂತ್ರಸ್ತನ ಖಾಸಗಿತನಕ್ಕೂ ಧಕ್ಕೆ ತರುತ್ತವೆ’ ಎಂದು ಅಭಿಪ್ರಾಯಪಟ್ಟಿತು.
ಕೈಪಿಡಿ ರಚಿಸುವ ಅಗತ್ಯವಿದೆ. ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಇದಕ್ಕೆ ಸಂಬಂಧಿಸಿದ ಸಲಹೆಗಳನ್ನು ಒಂದು ತಿಂಗಳೊಳಗೆ ಗೃಹ ಸಚಿವಾಲಯಕ್ಕೆ ಸಲ್ಲಿಸಬೇಕು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಲಹೆಗಳನ್ನೂ ಪಡೆಯಬಹುದಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.