ADVERTISEMENT

ದೆಹಲಿ ಎಲ್‌ಜಿ, ಪಂಜಾಬ್ ರಾಜ್ಯಪಾಲರು ಸುಪ್ರೀಂ ಕೋರ್ಟ್‌ ಆದೇಶ ಓದಿಕೊಳ್ಳಲಿ: ಎಎಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2023, 11:46 IST
Last Updated 24 ನವೆಂಬರ್ 2023, 11:46 IST
<div class="paragraphs"><p>ಎಎಪಿ</p></div>

ಎಎಪಿ

   

ನವದೆಹಲಿ: ರಾಜ್ಯಪಾಲರು ಯಾವುದೇ ಕ್ರಮ ಕೈಗೊಳ್ಳದೆ ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪಂಜಾಬ್‌ ರಾಜ್ಯಪಾಲರು ಹಾಗೂ ದೆಹಲಿ ಲೆಫ್ಟಿನೆಂಟ್‌ ಗೌವರ್ನರ್‌ ಅವರು ನ್ಯಾಯಾಲಯದ ಆದೇಶವನ್ನು ಓದಿಕೊಳ್ಳಲಿ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್‌ ಛಡ್ಡಾ ಶುಕ್ರವಾರ ಹೇಳಿದ್ದಾರೆ.

ಜೂನ್‌ 19 ಹಾಗೂ 20ರಂದು ನಡೆದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವ ಮಸೂದೆ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು. ಆದರೆ, ಕಾನೂನು ರಚಿಸುವ ಶಾಸನ ಸಭೆಗಳ ಪ್ರಕ್ರಿಯೆಯನ್ನು ವಿಫಲಗೊಳಿಸುವ ಅಧಿಕಾರವನ್ನು ಚಲಾಯಿಸಬಾರದು ಎಂದು ಪಂಜಾಬ್‌ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರಿಗೆ ಕೋರ್ಟ್‌ ಸೂಚಿಸಿದೆ.

ADVERTISEMENT

ಅಧಿವೇಶನದಲ್ಲಿ ಅನುಮೋದಿಸಿದ್ದ ನಾಲ್ಕು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಪೀಠ, ನವೆಂಬರ್ 10ರಂದು ನೀಡಿರುವ ಆದೇಶದಲ್ಲಿ ಈ ಮಾತು ಹೇಳಿದೆ. ಆದೇಶದ ಪ್ರತಿಯನ್ನು ಗುರುವಾರ (ನ.23ರಂದು) ರಾತ್ರಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದೆ.

ಸುಪ್ರೀಂ ಕೋರ್ಟ್‌ ಆದೇಶ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ (ಟ್ವಿಟರ್‌)ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಛಡ್ಡಾ, 'ಪಂಜಾಬ್‌ ರಾಜ್ಯಪಾಲರ ವಿರುದ್ಧ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಗೌರವಾನ್ವಿತ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ರಾಜ್ಯಪಾಲರು ರಾಜ್ಯಗಳ 'ಚುನಾಯಿತರಲ್ಲದ' ಮುಖ್ಯಸ್ಥರಾಗಿದ್ದಾರೆ ಮತ್ತು ಅವರು ತಮಗಿರುವ ಅಧಿಕಾರವನ್ನು ಶಾಸಕಾಂಗಕ್ಕೆ ಅಡ್ಡಿಪಡಿಸಲು ಬಳಸಬಾರದು ಎಂದು ಸ್ಪಷ್ಟಪಡಿಸಿದೆ'

'ಅದನ್ನು ಅರ್ಥಮಾಡಿಕೊಳ್ಳಲು ಪಂಜಾಬ್‌ ರಾಜ್ಯಪಾಲರು ಮತ್ತು ದೆಹಲಿ ಲೆಫ್ಟಿನೆಂಟ್‌ ಗೌವರ್ನರ್‌ ಅವರು ಆದೇಶದ ಪ್ರತಿಯನ್ನು ಬಹುಶಃ ಹಲವು ಸಲ ಓದಬೇಕಾಗುತ್ತದೆ. ಅಗತ್ಯಬಿದ್ದರೆ ನುರಿತ ವಕೀಲರ ನೆರವನ್ನೂ ಪಡೆಯಲಿ' ಎಂದು ತಿವಿದಿದ್ದಾರೆ.

ಪಂಜಾಬ್‌ನಲ್ಲಿ ಅಸ್ತಿತ್ವದಲ್ಲಿರುವ ಆಮ್‌ ಆದ್ಮಿ ಪಕ್ಷದ ಸರ್ಕಾರ ಹಾಗೂ ಮುಖ್ಯಮಂತ್ರಿ ಭಗವಂತ್‌ ಮಾನ್‌ ವಿರುದ್ಧ ಪುರೋಹಿತ್‌ ಹಗೆ ಸಾಧಿಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.