ADVERTISEMENT

ಅಯೋಧ್ಯೆ ವಿವಾದ ಸಂಧಾನದ ಮೂಲಕ ಬಗೆಹರಿಸಿ: ಸುಪ್ರೀಂ ಆದೇಶ

ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಂಧಾನ ಸಮಿತಿ ನೇಮಕ *ಎಂಟು ವಾರ ಗಡುವು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 10:39 IST
Last Updated 6 ನವೆಂಬರ್ 2019, 10:39 IST
   

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಸಂಧಾನದ ಮೂಲಕ ಪರಿಹರಿಸಲು ಸಾಧ್ಯ
ವಿದೆಯೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಖಲೀಫುಲ್ಲಾ ನೇತೃತ್ವದ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಿದೆ. ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸಮಿತಿಗೆ ಎಂಟು ವಾರಗಳ ಸಮಯಾವಕಾಶ ನೀಡಲಾಗಿದೆ.

ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಅವರು ಸಮಿತಿಯ ಇತರ ಸದಸ್ಯರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಆದೇಶ ನೀಡಿದೆ. ಸಮಿತಿಯು ಬಯಸಿದರೆ ಇನ್ನಷ್ಟು ಜನರನ್ನು ಸೇರಿಸಿಕೊಳ್ಳಲು ಅವಕಾಶ ಇದೆ ಎಂದು ಪೀಠ ಹೇಳಿದೆ.

ಸಂಧಾನ ಮಾತುಕತೆಗಳು ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ನಡೆಯಲಿವೆ. ರಾಜ್ಯ ಸರ್ಕಾರವು ಅಗತ್ಯ ವ್ಯವಸ್ಥೆ
ಗಳನ್ನು ಮಾಡಿಕೊಡಬೇಕು ಎಂದು ಪೀಠ ಸೂಚಿಸಿದೆ. ಸೌಹಾರ್ದ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಮಧ್ಯಸ್ಥಿಕೆ ಮಾತು
ಕತೆನಡೆಸಲು ಕಾನೂನಿನ ತೊಡಕು ಇಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ADVERTISEMENT

ಶುಕ್ರವಾರದಿಂದ ಒಂದು ವಾರದೊಳಗೆ ಮಧ್ಯಸ್ಥಿಕೆ ಪ್ರಕ್ರಿಯೆ ಆರಂಭವಾಗಬೇಕು. ಅದಾದ ಬಳಿಕ ನಾಲ್ಕು ವಾರಗಳಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಬೇಕು. ಒಟ್ಟು ಎಂಟು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈಗ ಇರುವ ನಿಯಮಗಳ ಅನುಸಾರವೇ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿರ್ಮೋಹಿ ಅಖಾಡವನ್ನು ಬಿಟ್ಟು ಇತರ ಹಿಂದೂ ಕಕ್ಷಿದಾರರು ಮಧ್ಯಸ್ಥಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದೆ ನಡೆಸಲಾಗಿದ್ದ ಇಂತಹ ಪ್ರಯತ್ನಗಳು ವಿಫಲವಾಗಿವೆ ಎಂಬುದು ಅವರ ವಿರೋಧಕ್ಕೆ ಕಾರಣವಾಗಿತ್ತು. ಆದರೆ, ಮುಸ್ಲಿಂ ಕಕ್ಷಿದಾರರು ಸಂಧಾನದ
ಪ್ರಯತ್ನವನ್ನು ಸ್ವಾಗತಿಸಿದ್ದರು.

ಕಕ್ಷಿದಾರರು ನೀಡಿದ್ದ ಸಲಹೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಪೀಠವು ಮಧ್ಯಸ್ಥಿಕೆದಾರರನ್ನು ಆಯ್ಕೆ ಮಾಡಿದೆ.

ಅಯೋಧ್ಯೆ ವಿವಾದ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ 2010ರಲ್ಲಿ ತೀರ್ಪು ನೀಡಿ ಮೂರು ಕಕ್ಷಿದಾರರ ನಡುವೆ ವಿವಾದಿತ ನಿವೇಶನವನ್ನು ಸಮಾನವಾಗಿ ಹಂಚಿಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 14 ಮೇಲ್ಮನವಿಗಳು ದಾಖಲಾಗಿವೆ.

ಸಂಧಾನಕಾರರು...

ನ್ಯಾ.ಎಫ್‌.ಎಂ.ಐ.ಖಲೀಫುಲ್ಲಾ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಇಬ್ರಾಹಿಂ ಖಲೀಫುಲ್ಲಾ (68) ಅವರು ದಕ್ಷಿಣ ತಮಿಳುನಾಡಿನ ಕಾರೈಕುಡಿಯವರು. ಕಾರ್ಮಿಕ ಕಾನೂನಿನಲ್ಲಿ ಪರಿಣತ. 2000ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕ. 2012ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ. ವಕೀಲರಾಗಿ 20 ವರ್ಷ, ನ್ಯಾಯಮೂರ್ತಿಯಾಗಿ 16 ವರ್ಷ ಅನುಭವ.

ಮಧ್ಯಸ್ಥಿಕೆ ಸಮಿತಿಗೆ ನನ್ನನ್ನು ಸುಪ್ರೀಂ ಕೋರ್ಟ್‌ ಆಯ್ಕೆ ಮಾಡಿರುವ ವಿಚಾರ ಗೊತ್ತಾಗಿದೆ. ಆದೇಶ ಪ್ರತಿ ಇನ್ನಷ್ಟೇ ಕೈ ಸೇರಬೇಕಿದೆ. ಸಮಿತಿ ರಚನೆಯಾದರೆ, ಈ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇವೆ
–ನ್ಯಾ.ಎಫ್‌.ಎಂ.ಖಲೀಫುಲ್ಲಾ

***
ಶ್ರೀ ಶ್ರೀ ರವಿಶಂಕರ್

ಶ್ರೀ ಶ್ರೀ ರವಿಶಂಕರ್ ಗುರೂಜಿ (62) ಅವರ ಹುಟ್ಟೂರು ತಮಿಳುನಾಡಿನ ತಂಜಾವೂರಿನ ಪಾಪನಾಶಂ. 1981ರಲ್ಲಿ ಬೆಂಗಳೂರಿನಲ್ಲಿ ‘ಆರ್ಟ್‌ ಆಫ್‌ ಲಿವಿಂಗ್‌’ ಆರಂಭಿಸಿದ ಅವರು ಈಗ ಆಧ್ಯಾತ್ಮಿಕ ಗುರುವಾಗಿ ಖ್ಯಾತರಾಗಿದ್ದಾರೆ. ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಂಬಂಧಪ್ಟಟವರ ಮನವೊಲಿಸಲು ಈ ಹಿಂದೆ ಪ್ರಯತ್ನಿಸಿದ್ದರು.

ಎಲ್ಲರನ್ನೂ ಗೌರವಿಸುತ್ತ, ಕನಸನ್ನು ನನಸಾಗಿಸುತ್ತ ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಲುದೀರ್ಘಾವಧಿಯ ಸಂಘರ್ಷವನ್ನು ಕೊನೆಗಾಣಿಸಬೇಕಿದೆ. ಈ ಗುರಿಗಳತ್ತ ಎಲ್ಲರೂ ಒಗ್ಗಟ್ಟಾಗಿ ಹೆಜ್ಜೆಯಿಡಬೇಕು

– ಶ್ರೀ ಶ್ರೀ ರವಿಶಂಕರ್ ಗುರೂಜಿ

***

ಶ್ರೀರಾಂ ಪಂಚು

ವಕೀಲ ಶ್ರೀರಾಂ ಪಂಚು ಅವರು ಭಾರತದ ಅತ್ಯುತ್ತಮ ಸಂಧಾನಕಾರರಲ್ಲಿ ಒಬ್ಬರು ಎಂದು ಸ್ವತಃ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ‘ಮಧ್ಯಸ್ಥಿಕೆ’ಯನ್ನು ಪ್ರಚುರಪಡಿಸಿದ ಹೆಗ್ಗಳಿಕೆ ಇವರದು. ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ದೇಶದ ಕೆಲವು ಪ್ರಮುಖ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿದ್ದಾರೆ. ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವಣ 500 ಚದರ ಕಿ.ಮೀ. ಭೂಮಿಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಲು ಸುಪ್ರೀಂ ಕೋರ್ಟ್‌ ಇವರನ್ನು ಸಂಧಾನಕಾರರಾಗಿ ನೇಮಕ ಮಾಡಿತ್ತು. ಇವರು ಚೆನ್ನೈನವರು.

ಇದು ಸುಪ್ರೀಂ ಕೋರ್ಟ್‌ ನನಗೆ ನೀಡಿರುವ ಅತ್ಯಂತ ದೊಡ್ಡ ಹೊಣೆ. ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ– ಶ್ರೀರಾಂ ಪಂಚು

***

ಇಡೀ ಸಂಧಾನ ಪ್ರಕ್ರಿಯೆ ಗೋಪ್ಯವಾಗಿ (ಇನ್‌ ಕ್ಯಾಮೆರಾ) ನಡೆಯಬೇಕು. ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳು ಈ ಸಂಧಾನ ಮಾತುಕತೆಯಲ್ಲಿ ಏನು ನಡೆದಿದೆ ಎಂಬುದನ್ನು ವರದಿ ಮಾಡುವಂತಿಲ್ಲ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.