ಸೂರತ್: ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಅಪರಾಧ ಸಾಬೀತಾದ ಕಾರಣ ವ್ಯಕ್ತಿಯೊಬ್ಬನಿಗೆ ಬುಧವಾರ ಸೂರತ್‌ನ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶರಾದ ಶಕುಂತಲಾ ಸೋಲಂಕಿ ಅವರು, ಅಪರಾಧಿ ಯೂಸುಫ್ ಇಸ್ಮಾಯಿಲ್‌ಗೆ ಗಲ್ಲುಶಿಕ್ಷೆ ಪ್ರಕಟಿಸಿ, ಸಂತ್ರಸ್ತೆಯ ಕುಟುಂಬಕ್ಕೆ ರಾಜ್ಯ ಸರ್ಕಾರವು ₹10 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದರು.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ಸ್ 302 (ಕೊಲೆ) ಮತ್ತು 376 (ಅತ್ಯಾಚಾರ) ಮತ್ತು ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಇಸ್ಮಾಯಿಲ್ ಅಪರಾಧಿ ಎಂಬುದು ಸಾಬೀತಾಗಿದೆ.
‘ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ತಪ್ಪಿತಸ್ಥನಿಗೆ ಮರಣದಂಡನೆ ವಿಧಿಸಬೇಕೆಂದು’ ಸಂತ್ರಸ್ತೆಯ ಪರ ವಕೀಲರು ವಾದ ಮಂಡಿಸಿದ್ದರು.
ಸೂರತ್‌ನ ಸಚಿನ್ ಕೈಗಾರಿಕಾ ಪ್ರದೇಶ ಸಮೀಪದ ಕಪ್ಲೇತಾ ಹಳ್ಳಿಯಲ್ಲಿ ಘಟನೆ ನಡೆದಿತ್ತು. ಇಸ್ಮಾಯಿಲ್ ಸಂತ್ರಸ್ತೆಯ ತಂದೆಯ ಸ್ನೇಹಿತನಾಗಿದ್ದ. ಫೆಬ್ರುವರಿ 27ರಂದು ಸಮೀಪದ ಅಂಗಡಿಯಲ್ಲಿ ಮಗುವಿಗೆ ತಿಂಡಿ ಕೊಡಿಸುತ್ತೇನೆಂದು ಕರೆದೊಯ್ದಿದ್ದ ಇಸ್ಮಾಯಿಲ್, ಮಗುವಿನ ಮೇಲೆ ಅತ್ಯಾಚಾರ ನಡೆಸಿ ಬಳಿಕ ಚಾಕುವಿನಿಂದ ಇರಿದು ಕೊಂದಿದ್ದ. ನಂತರ ಮಗುವಿನ ಮೃತದೇಹವನ್ನು ತೆರೆದ ಮೈದಾನವೊಂದರಲ್ಲಿ ಬಿಸಾಡಿದ್ದ. ಫೆ. 28ರಂದು ಪೊಲೀಸರು ಇಸ್ಮಾಯಿಲ್‌ನನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.