ನವದೆಹಲಿ: ಪಾಕಿಸ್ತಾನದ ಉಗ್ರರ ಮೇಲೆ ನಡೆಸಲಾಗಿದ್ದ ನಿರ್ದಿಷ್ಟ ದಾಳಿಯ (ಸರ್ಜಿಕಲ್ ಸ್ಟ್ರೈಕ್) ರೂವಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾಂಗ್ರೆಸ್‌ನ ಕಾರ್ಯಪಡೆಯನ್ನು ಮುನ್ನಡೆಸಲಿದ್ದಾರೆ.
‘ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾಂಗ್ರೆಸ್‌ನ ಮುನ್ನೋಟವನ್ನು ರೂಪಿಸುವ ಸಲುವಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಡಿ.ಎಸ್.ಹೂಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಈ ಕಾರ್ಯಪಡೆಯನ್ನು ಹೂಡಾ ಅವರು ಮುನ್ನಡೆಸಲಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಆಯ್ದ ಪರಿಣಿತರ ಜತೆ ಚರ್ಚೆ ನಡೆಸಿ ಅವರು ಮುನ್ನೋಟವನ್ನು ಸಿದ್ಧಪಡಿಸಲಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.
2016ರ ಸೆಪ್ಟೆಂಬರ್ 29ರಂದು ಭಾರತೀಯ ಸೈನಿಕರು ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಹೋಗಿ, ಉಗ್ರರ ನೆಲೆಗಳನ್ನು ನಾಶ ಮಾಡಿಬಂದಿದ್ದರು. ಉರಿ ಸೇನಾನೆಲೆ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಈ ನಿರ್ದಿಷ್ಟ ದಾಳಿ ನಡೆಸಲಾಗಿತ್ತು. ಈ ದಾಳಿಯನ್ನು ಹೂಡಾ ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.