ADVERTISEMENT

‘ಕೇಸರಿ ಭಯೋತ್ಪಾದನೆ’ ಪದ ನನ್ನದಲ್ಲ: ಸುಶೀಲ್‌ ಕುಮಾರ್ ಶಿಂಧೆ

ಸರ್ಕಾರದ ಗೋಪ್ಯ ದಾಖಲೆಯಲ್ಲಿ ಉಲ್ಲೇಖ: ಸುಶೀಲ್‌ ಕುಮಾರ್‌ ಶಿಂಧೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:59 IST
Last Updated 9 ಸೆಪ್ಟೆಂಬರ್ 2024, 15:59 IST
ಸುಶೀಲ್‌ ಕುಮಾರ್‌ ಶಿಂಧೆ
ಸುಶೀಲ್‌ ಕುಮಾರ್‌ ಶಿಂಧೆ   

ನವದೆಹಲಿ: ‘ಕೇಸರಿ ಭಯೋತ್ಪಾದನೆ’ ಎಂಬ ಪದ ತಾವು ಹುಟ್ಟುಹಾಕಿದ್ದಲ್ಲ. ಸರ್ಕಾರದ ಗೋಪ್ಯ ದಾಖಲೆಯಲ್ಲಿ ಅದನ್ನು ಕಂಡಿದ್ದೆ ಎಂಬುದನ್ನು ಕಾಂಗ್ರೆಸ್‌ ನಾಯಕ ಸುಶೀಲ್‌ ಕುಮಾರ್‌ ಶಿಂಧೆ ಅವರು ಬಹಿರಂಗಪಡಿಸಿದ್ದಾರೆ.

ತಮ್ಮ ಐದು ದಶಕಗಳ ರಾಜಕೀಯ ಜೀವನದ ಕುರಿತ ‘ಫೈವ್‌ ಡಿಕೇಡ್ಸ್‌ ಇನ್‌ ಪಾಲಿಟಿಕ್ಸ್‌’ ಜೀವನ ಚರಿತ್ರೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಪತ್ರಕರ್ತ ರಶೀದ್‌ ಕಿದ್ವಾಯಿ ಅವರು ಬರೆದಿರುವ ಜೀವನ ಚರಿತ್ರೆಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.

2013ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಶಿಂಧೆ ಅವರು ‘ಕೇಸರಿ ಭಯೋತ್ಪಾದನೆ’ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಜೈಪುರದಲ್ಲಿ ನಡೆದಿದ್ದ ಕಾಂಗ್ರೆಸ್‌ ಚಿಂತನಾ ಶಿಬಿರದ ಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ‘ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯು ತರಬೇತಿ ಶಿಬಿರಗಳನ್ನು ನಡೆಸುತ್ತಿರುವುದು ಗೃಹ ಸಚಿವಾಲಯ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ’ ಎಂದಿದ್ದರು.

ADVERTISEMENT

‘ಕೇಂದ್ರ ಗೃಹ ಸಚಿವಾಲಯ ಸಿದ್ಧಪಡಿಸಿದ ಗೋ‌ಪ್ಯ ದಾಖಲೆಯೊಂದರಲ್ಲಿ ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ನಾನು ನೋಡಿದ್ದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅದರಲ್ಲಿ ತೊಡಗಿಸಿಕೊಂಡಿದ್ದರಿಂದ ಆ ಪದವು ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಮರ್ಥ್ಯ ಹೊಂದಿತ್ತು’ ಎಂಬುದನ್ನು ನೆನಪಿಸಿಕೊಂಡಿದ್ದಾರೆ.

‘ಆ ಪದವನ್ನು ಸಾರ್ವಜನಿಕವಾಗಿ ಹೇಳುವ ಮುನ್ನ ನಾನು ಅದರ ಸತ್ಯಾಸತ್ಯತೆ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಿದ್ದೆ. ಆ ಪದವನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಂಡಿದ್ದೆ. ಹಿಂದೂ ಭಯೋತ್ಪಾದನೆ ಎಂಬ ಪದವನ್ನು ನಾನು ಎಂದಿಗೂ ಉಲ್ಲೇಖಿಸಲಿಲ್ಲ’ ಎಂದಿದ್ದಾರೆ.

ಅಂದು ಗೃಹ ಕಾರ್ಯದರ್ಶಿಯಾಗಿದ್ದ ಆರ್‌.ಕೆ.ಸಿಂಗ್‌ (ಆ ಬಳಿಕ ಬಿಜೆಪಿ ಸೇರಿ ಕೇಂದ್ರ ಸಚಿವರಾಗಿದ್ದಾರೆ) ಅವರು ‘ಕೇಸರಿ ಭಯೋತ್ಪಾದನೆ’ಗೆ ಸಾಕ್ಷ್ಯಗಳಿವೆ ಎಂದು ಹೇಳಿದ್ದರು. ಅವರ ಹೇಳಿಕೆ ‘ಅಚ್ಚರಿ ಉಂಟುಮಾಡಿತ್ತು’ ಎಂಬುದನ್ನೂ ಶಿಂಧೆ ಉಲ್ಲೇಖಿಸಿದ್ದಾರೆ.

ಸಾವರ್ಕರ್‌ ವ್ಯಕ್ತಿತ್ವಕ್ಕೆ ಹಲವು ಆಯಾಮ: ‘ಸಾವರ್ಕರ್‌ ವಿಷಯಕ್ಕೆ ಬಂದಾಗ ನಾವು ಅವರ ಹಿಂದುತ್ವದ ಸಿದ್ಧಾಂತದ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತೇವೆ. ಅವರ ವ್ಯಕ್ತಿತ್ವವು ಹಲವಾರು ಆಯಾಮಗಳನ್ನು ಹೊಂದಿತ್ತು. ಅವರನ್ನೊಬ್ಬ ತತ್ವಜ್ಞಾನಿ ಮತ್ತು ವಿಜ್ಞಾನಿಯಾಗಿ ನಾವು ಏಕೆ ಕಂಡಿಲ್ಲ? ಸಮಾಜದಲ್ಲಿ ಸಮಾನತೆ ತರಲು ಮತ್ತು ದಲಿತರ ಏಳಿಗೆಗಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.