ADVERTISEMENT

ಇಷ್ಟವಿಲ್ಲದಿದ್ದರೆ ಪಕ್ಷ ಬಿಡಿ: ಶತ್ರುಘ್ನಗೆ ಬಿಸಿ ಮುಟ್ಟಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 20:10 IST
Last Updated 17 ಜನವರಿ 2019, 20:10 IST
ಸುಶೀಲ್‌ ಕುಮಾರ್‌ ಮೋದಿ
ಸುಶೀಲ್‌ ಕುಮಾರ್‌ ಮೋದಿ   

ಪಟ್ನಾ:ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಬಂಡಾಯ ಸಂಸದ ಶತ್ರುಘ್ನ ಸಿನ್ಹಾ ಅವರನ್ನು ಪಕ್ಷ ಬಿಟ್ಟು ಹೋಗುವಂತೆ ಬಿಜೆಪಿ ಹೇಳಿದೆ.

‘ಪಕ್ಷ ಹಾಗೂ ಅದರ ನಾಯಕರ ಬಗ್ಗೆ ಇಷ್ಟವಿಲ್ಲ ಎಂದರೆ ಮುಂದುವರಿಯಬಾರದು. ಕೂಡಲೇ ರಾಜೀನಾಮೆ ನೀಡಿ ಹೊರಹೋಗಲಿ’ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

‘ಪ್ರಧಾನಿ ಸೇರಿದಂತೆ ಪಕ್ಷದ ರಾಷ್ಟ್ರೀಯ ನಾಯಕರನ್ನುಯಶವಂತ್‌ ಸಿನ್ಹಾ ಅವರ ಜತೆ ಸೇರಿ ನೀವು ನಿಂದಿಸುತ್ತಿದ್ದೀರಿ. ನಿಮ್ಮನ್ನು ಎರಡು ಬಾರಿ ರಾಜ್ಯಸಭೆಗೆ ಹಾಗೂ ಎರಡು ಬಾರಿ ಲೋಕಸಭೆಗೆ ಕಳುಹಿಸಿದ ಪಕ್ಷವನ್ನೇ ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದೀರಿ. ಪಕ್ಷದ ನಾಯಕತ್ವದ ಬಗ್ಗೆ ನಿಮಗೆ ಅತೃಪ್ತಿಯಿದ್ದರೆ ಹೊರ ಹೋಗಿ’ ಎಂದು ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.

ಪಟ್ನಾ ಸಾಹಿಬ್‌ ಕ್ಷೇತ್ರದ ಸಂಸದ ಸಿನ್ಹಾ ಅವರು, ಪ್ರಧಾನಿ ಮೋದಿ ಅವರನ್ನು ಸಂದರ್ಶನಗಳಲ್ಲಿ, ಟ್ವೀಟ್‌ಗಳ ಮೂಲಕ ಟೀಕಿಸುತ್ತಲೇ ಬಂದಿದ್ದಾರೆ. ಇತ್ತೀಚಿನ ಟ್ವೀಟ್‌ನಲ್ಲಿ ಅವರು, ‘ಪ್ರಧಾನಿ ಸರ್‌, ಬದ್ಧದ್ವೇಷದ ರಾಜಕಾರಣ ಬಹಳ ದಿನ ಉಳಿಯುವುದಿಲ್ಲ. ಪಿ.ಚಿದಂಬರಂ, ಶಶಿ ತರೂರ್‌, ರಾಹುಲ್‌ ಗಾಂಧಿ, ರಾಬರ್ಟ್‌ ವಾದ್ರಾ ಮತ್ತು ವಿಶೇಷವಾಗಿ ಲಾಲು ಪ್ರಸಾದ್‌ ಅವರು ಜನರ ಸಹಾನುಭೂತಿ ಪಡೆಯುತ್ತಿದ್ದಾರೆ. ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದರು.

ತಮ್ಮ ಜನಪ್ರಿಯತೆ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೆ, ಈ ಬಾರಿ ಪಟ್ನಾ ಸಾಹಿಬ್‌ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಸಿನ್ಹಾ ಅವರಿಗೆಸುಶೀಲ್‌ ಮೋದಿ ಸವಾಲು ಹಾಕಿದ್ದಾರೆ.

‘ಇಂಥ ಸಣ್ಣ ನಾಯಕರ ಎದುರು ನಾನು ಬಗ್ಗುವವನಲ್ಲ. ಪರಿಸ್ಥಿತಿ ಬದಲಾದರೂ ನನ್ನ ಕ್ಷೇತ್ರ ಅದೇ ಇರುತ್ತದೆ ಎಂದು ಮೊದಲೇ ಹೇಳಿದ್ದೇನೆ’ ಎಂದು ಶತ್ರುಘ್ನ ಸಿನ್ಹಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಲಾಲು ಪ್ರಸಾದ್‌ ಹಾಗೂ ರಾಹುಲ್‌ ಗಾಂಧಿ ಅವರ ಬಗ್ಗೆ ಸಹಾನುಭೂತಿ ಹೊಂದಿರುವ ಸಿನ್ಹಾ ಅವರು, ಕಾಂಗ್ರೆಸ್‌ ಅಥವಾ ಆರ್‌ಜೆಡಿಯಿಂದ ಸ್ಪರ್ಧಿಸುವ ಬಗ್ಗೆ ಮಾಹಿತಿ ಬಹಿರಂಗಪಡಿಸಲಿಲ್ಲ. ‘ಸಮಯ ಬಂದಾಗ ನನ್ನ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಾಗುತ್ತದೆ’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.

ವಿರೋಧ ಪಕ್ಷಗಳ ರ‍್ಯಾಲಿಗೆ ಶತ್ರುಘ್ನ ಸಿನ್ಹಾ

ತೃಣಮೂಲ ಕಾಂಗ್ರೆಸ್‌ ಜನವರಿ 19 ರಂದು ಆಯೋಜಿಸಿರುವ ವಿರೋಧ ಪಕ್ಷಗಳ ರ‍್ಯಾಲಿಯಲ್ಲಿ ಭಾಗವಹಿಸುವುದಾಗಿ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಗುರುವಾರ ಹೇಳಿದ್ದಾರೆ.

‘ಬಿಜೆಪಿಯಲ್ಲಿ ನನಗೆ ಗೌರವ ಸಿಕ್ಕಿಲ್ಲ. ಆದ್ದರಿಂದ ಯಶವಂತ್‌ ಸಿನ್ಹಾ ಅವರು ಆರಂಭಿಸಿರುವ ‘ರಾಷ್ಟ್ರ ಮಂಚ್‌’ ಪ್ರತಿನಿಧಿಯಾಗಿ ರ‍್ಯಾಲಿಯಲ್ಲಿ ಭಾಗವಹಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ನನ್ನ ಪಕ್ಷ ನಿಷ್ಠೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಪಕ್ಷದ ಇಬ್ಬರು ಸಂಸದರಿದ್ದಾಗ ನಾನು ಬಿಜೆಪಿ ಸೇರಿದ್ದೇನೆ. ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದೇನೆ. ಆದರೆ, ಈಗ ನನಗೆ ಗೌರವ ಸಿಗುತ್ತಿಲ್ಲ’ ಎಂದು ಕೇಂದ್ರದ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ.

ರಾಷ್ಟ್ರದ ಪ್ರಮುಖ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಅವರು ‘ಉಕ್ಕಿನ ಮಹಿಳೆ’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.