ADVERTISEMENT

ಉ.ಪ್ರ | 5 ಕೆ.ಜಿ. ಗೋಧಿ ಕಳವು ಶಂಕೆ: ಪರಿಶಿಷ್ಟ ಜಾತಿಯ ಮೂವರು ಬಾಲಕರಿಗೆ ಥಳಿತ

ಪಿಟಿಐ
Published 10 ಅಕ್ಟೋಬರ್ 2024, 13:42 IST
Last Updated 10 ಅಕ್ಟೋಬರ್ 2024, 13:42 IST
ಥಳಿತ– ಪ್ರಾತಿನಿಧಿಕ ಚಿತ್ರ
ಥಳಿತ– ಪ್ರಾತಿನಿಧಿಕ ಚಿತ್ರ   

ಬಹರಾಯಿಚ್‌ (ಉತ್ತರಪ್ರದೇಶ): ಕೋಳಿ ಫಾರಂನಿಂದ 5 ಕೆ.ಜಿ ಗೋಧಿ ಕದ್ದಿದ್ದಾರೆಂದು ಶಂಕಿಸಿ ಪರಿಶಿಷ್ಟ ಜಾತಿಯ ಮೂವರು ಬಾಲಕರನ್ನು ಥಳಿಸಿ, ಅವರ ತಲೆ ಬೋಳಿಸಿ ಮೆರವಣಿಗೆ ಮಾಡಿರುವ ಪ್ರಕರಣ ನಾನ್‌ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಟೆಡಿಯಾ ಗ್ರಾಮದಲ್ಲಿ ನಡೆದಿದೆ.

ಕೋಳಿ ಫಾರಂನ ಇಬ್ಬರು ಮಾಲೀಕರು ಮತ್ತಿಬ್ಬರು ಆರೋಪಿಗಳ ಜತೆ ಸೇರಿ, ಮಂಗಳವಾರ 12ರಿಂದ 14 ವರ್ಷ ವಯಸ್ಸಿನ ಮೂವರು ಬಾಲಕರ ಮುಂಗೈಗೆ ‘ಕಳ್ಳ’ ಎಂದು ಬರೆಸಿ, ಮುಖಕ್ಕೆ ಮಸಿ ಬಳಿದು, ಕೈಗಳನ್ನು ಕಟ್ಟಿ ಗ್ರಾಮದಾದ್ಯಂತ ಮೆರವಣಿಗೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕರ ಕುಟುಂಬದವರು ನೀಡಿದ ದೂರು ಆಧರಿಸಿ ನಜೀಂ ಖಾನ್, ಖಾಸಿಂ ಖಾನ್, ಇನಾಯತ್ ಮತ್ತು ಸಾನು ಎಂಬವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬುಧವಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸಾನು ಎಂಬಾತ ತಲೆಮರೆಸಿಕೊಂಡಿದ್ದು, ಉಳಿದ ಮೂವರನ್ನು ಬಂಧಿಸಲಾಗಿದೆ ಎಂದು ನಾನ್‌ಪಾರಾ ಠಾಣೆಯ ಅಧಿಕಾರಿ ಪ್ರದೀಪ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ಗ್ರಾಮದಲ್ಲಿ ಕೋಳಿ ಫಾರಂ ನಡೆಸುತ್ತಿದ್ದ ನಜೀಂ ಮತ್ತು ಖಾಸಿಂ ಅವರು, ಕೋಳಿ ಫಾರಂ ಕೆಲಸಕ್ಕೆ ಬರಲಿಲ್ಲವೆಂದು ಬಾಲಕರ ಮೇಲೆ ಗೋಧಿ ಕಳವು ಆರೋಪ ಹೊರಿಸಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂತ್ರಸ್ತ ಬಾಲಕರ ಕುಟುಂಬಗಳು ಆರೋಪಿಸಿವೆ.

ಆರೋಪಿಗಳು ಬಾಲಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಜಾತಿ ನಿಂದನೆ ಕೂಡ ಮಾಡಿದ್ದಾರೆ. ಅಲ್ಲದೆ, ವಿದ್ಯುತ್ ಕೇಬಲ್‌ಗಳಿಂದ ಕತ್ತು ಹಿಸುಕಲು ಪ್ರಯತ್ನಿಸಿದ್ದಾರೆ. ಬಾಲಕರಿಗೆ ನೀಡಿದ ಚಿತ್ರಹಿಂಸೆಯನ್ನು ಆರೋಪಿಗಳು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.