ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿಯೇ ಇದನ್ನು ದಾಳವಾಗಿ ಬಳಸಿ, ಕೇಜ್ರಿವಾಲ್ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಲು ಬಿಜೆಪಿ ಅವರಿಗೆ ‘ಬ್ಲ್ಯಾಕ್‌ಮೇಲ್’ ಮಾಡಿದೆ ಎಂದು ದೆಹಲಿ ಸಚಿವೆ ಆತಿಶಿ ಆರೋಪಿಸಿದರು.
ಮುಖ್ಯಮಂತ್ರಿ ಅವರ ಭೇಟಿಗೆ ಯಾವುದೇ ಸಮಯ ನಿಗದಿಯಾಗದಿದ್ದರೂ ಸ್ವಾತಿ ಅವರು, ಮುಖ್ಯಮಂತ್ರಿ ಅವರ ಅಧಿಕೃತ ನಿವಾಸಕ್ಕೆ ಮೇ 13ರಂದು ಏಕೆ ಹೋಗಿದ್ದರು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಅಂದು ಕೇಜ್ರಿವಾಲ್ ಅವರು ಸ್ವಾತಿ ಅವರನ್ನು ಭೇಟಿಯಾಗಲಿಲ್ಲ. ಒಂದು ವೇಳೆ ಭೇಟಿಯಾಗಿದ್ದಲ್ಲಿ, ಬಿಭವ್ ವಿರುದ್ಧ ಈಗ ಇರುವ ಆರೋಪಗಳು ಅವರ ಮೇಲೆ ಬರುತ್ತಿದ್ದವು’ ಎಂದು ಅವರು ಹೇಳಿದರು.
‘ಬಿಜೆಪಿಯವರು ಮೊದಲು ಪ್ರಕರಣಗಳನ್ನು ದಾಖಲಿಸುತ್ತಾರೆ. ನಂತರ ನಾಯಕರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕುತ್ತಾರೆ. ಸ್ವಾತಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಕ್ರಮ ನೇಮಕಾತಿ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ’ ಎಂದು ಅವರು ವಿವರಿಸಿದರು.
ಸ್ವಾತಿ ಅವರ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದರೆ, ಅವರು ಯಾವ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.
ಮತ್ತೊಂದು ವಿಡಿಯೊ: ಘಟನೆಯ ದಿನದ (ಮೇ 13) ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿ, ಮಹಿಳಾ ಭದ್ರತಾ ಸಿಬ್ಬಂದಿಯು ಮಾಲಿವಾಲ್ ಅವರ ತೋಳನ್ನು ಹಿಡಿದುಕೊಂಡು ಕೇಜ್ರಿವಾಲ್ ಅವರ ನಿವಾಸದಿಂದ ಹೊರಗೆ ಕರೆದೊಯ್ಯತ್ತಿರುವ ದೃಶ್ಯ ಹಾಗೂ ಮುಖ್ಯ ದ್ವಾರದ ಹೊರಗೆ ಮಾಲಿವಾಲ್ ಅವರು ಭದ್ರತಾ ಸಿಬ್ಬಂದಿಯ ಕೈಯನ್ನು ಬಿಡಿಸಿಕೊಂಡ ದೃಶ್ಯ ದಾಖಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವೆ ಆತಿಶಿ, ‘ಸ್ವಾತಿ ಅವರು ನೀಡಿದ ದೂರಿನಲ್ಲಿ, ಹಲ್ಲೆಯ ಬಳಿಕ ತನಗೆ ನಡೆಯಲೂ ಆಗುತ್ತಿಲ್ಲ ಎಂದಿದ್ದರು. ಅಲ್ಲದೆ ಬಿಭವ್ ತನ್ನ ತಲೆಯನ್ನು ಮೇಜಿಗೆ ಬಡಿದಿದ್ದರಿಂದ ಗಾಯವಾಗಿದೆ ಎಂದೂ ದಾಖಲಿಸಿದ್ದರು. ಆದರೆ ಬಿಡುಗಡೆಯಾಗಿರುವ ಎರಡನೇ ವಿಡಿಯೊ (ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ) ಗಮನಿಸಿದರೆ ಅವರು ಕುಂಟದೆ, ಸಲೀಸಾಗಿ ನಡೆದು ಕೊಂಡು ಹೋಗುತ್ತಿರುವುದನ್ನು ಮತ್ತು ಭದ್ರತಾ ಸಿಬ್ಬಂದಿಯಿಂದ ತನ್ನ ಕೈಯನ್ನು ಬಿಡಿಸಿಕೊಂಡಿದ್ದನ್ನು ಕಾಣಬಹುದು. ಅಲ್ಲದೆ ಅವರ ಬಟ್ಟೆಯೂ ಹರಿದಿಲ್ಲ’ ಎಂದರು.
ಎಡಿಟ್ ಮಾಡಿದ ವಿಡಿಯೊ– ಬಿಜೆಪಿ: ಎಎಪಿ ನಾಯಕರು ‘ಎಡಿಟ್’ ಮಾಡಿದ ವಿಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಸ್ವಾತಿ ಅವರಿಗೆ ಕಳಂಕ ತಂದಿದ್ದಾರೆ ಎಂದು ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಶನಿವಾರ ಆರೋಪಿಸಿದ್ದಾರೆ.
ಎಎಪಿಯು ಮಾಲಿವಾಲ್ ಅವರ ಮಾನಹಾನಿ ಮಾಡುವ ಉದ್ದೇಶದಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.