ADVERTISEMENT

ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ದೌರ್ಜನ್ಯ: ಸಂಸದೆ ಸ್ವಾತಿ ಗಂಭೀರ ಆರೋಪ

ಪಿಟಿಐ
Published 13 ಮೇ 2024, 15:48 IST
Last Updated 13 ಮೇ 2024, 15:48 IST
ಸ್ವಾತಿ ಮಾಲಿವಾಲ್‌
ಸ್ವಾತಿ ಮಾಲಿವಾಲ್‌   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದಲ್ಲಿ ಮುಖ್ಯಮಂತ್ರಿಗಳ ಆಪ್ತ ಸಿಬ್ಬಂದಿಯಿಂದ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್‌ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಈ ಬಗ್ಗೆ ಮಾಲಿವಾಲ್‌ ಅವರು ಇದುವರೆಗೆ ಯಾವುದೇ ಲಿಖಿತ ದೂರು ದಾಖಲಿಸಿಲ್ಲ.

‘ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ಮಹಿಳೆಯೊಬ್ಬರು ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ, ದೆಹಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿರುವುದಾಗಿ ತಿಳಿಸಿದರು. ಬಳಿಕ ಕರೆಬಂದಿದ್ದು ಸಂಸದೆ ಸ್ವಾತಿ ಮಾಲಿವಾಲ್‌ ಅವರಿಂದ ಎಂಬುದು ತಿಳಿದುಬಂತು. ಸಿವಿಲ್‌ ಲೈನ್‌ ಪೊಲೀಸ್‌ ಠಾಣಾ ಸಿಬ್ಬಂದಿ ತಕ್ಷಣವೇ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಸ್ವಾತಿ ಅವರನ್ನು ಭೇಟಿ ಮಾಡಿದೆ. ಈ ವೇಳೆ ಅವರು ತಾವೇ ಖುದ್ದಾಗಿ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸುವುದಾಗಿ ಪೊಲೀಸರಿಗೆ ಹೇಳಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

‘10 ಗಂಟೆ ವೇಳೆಗೆ ಪೊಲೀಸ್‌ ಠಾಣೆಗೆ ತೆರಳಿರುವ ಸ್ವಾತಿ, ಕೆಲಕಾಲ ಠಾಣೆಯಲ್ಲಿಯೇ ಇದ್ದರೂ ಯಾವುದೇ ಲಿಖಿತ ದೂರು ದಾಖಲಿಸಿಲ್ಲ. ‘ಎಫ್‌ಐಆರ್‌ ದಾಖಲಿಸಲು ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಹಾಗಾಗಿ ವೈದ್ಯಕೀಯ ಪರೀಕ್ಷೆಯ ನಂತರ ಮರಳಿ ಬರುವೆ’ ಎಂದು ಹೇಳಿ ಅವರು ಠಾಣೆಯಿಂದ ಹೊರಹೋಗಿದ್ದಾರೆ’ ಎಂಬುದಾಗಿ ಡಿಸಿಪಿ ಮೀನಾ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಈ ರೀತಿಯ ಕೃತ್ಯ ಯಾವ ಮಹಿಳೆಯರ ಮೇಲೆ ನಡೆದರೂ ಅವರಿಗೆ ನ್ಯಾಯ ಸಿಗಲೇ ಬೇಕಿದೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ತನಿಖೆ ಮಾಡಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಆಡಳಿತಾರೂಡ ಎಎಪಿ ನಾಯಕರಾಗಲೀ, ಮುಖ್ಯಮಂತ್ರಿಗಳ ನಿವಾಸವಾಗಲೀ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರೋಪ ವಿಚಾರಣೆಗೆ ತಂಡ ರಚನೆ: ಮಹಿಳಾ ಆಯೋಗ

ನವದೆಹಲಿ: ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪದ ಕುರಿತು ಸೂಕ್ತ ವಿಚಾರಣೆ ನಡೆಸಲು ತನಿಖಾ ತಂಡವನ್ನು ರಚಿಸುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

‘ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಹಾಗಾಗಿ ಈ ಪ್ರಕರಣ ಸಂಬಂಧ ಪೊಲೀಸರು ತೆಗೆದುಕೊಂಡಿರುವ ಕ್ರಮಗಳ ಸಮಗ್ರ ವರದಿ(ಎಟಿಆರ್‌)ಯನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಔಪಚಾರಿಕ ಪತ್ರ ಬರೆಯಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.