ADVERTISEMENT

ಅಶೋಕ್ ಗೆಹಲೋತ್ ಅತ್ಯಾಚಾರಿಗಳ ಭಾಷೆ ಬಳಸುವುದನ್ನು ನಿಲ್ಲಿಸಬೇಕು: ಸ್ವಾತಿ ಮಲಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2022, 16:27 IST
Last Updated 7 ಆಗಸ್ಟ್ 2022, 16:27 IST
ಅಶೋಕ್ ಗೆಹಲೋತ್
ಅಶೋಕ್ ಗೆಹಲೋತ್   

ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಅತ್ಯಾಚಾರಿಗಳ ಭಾಷೆ ಬಳಸುವುದನ್ನು ನಿಲ್ಲಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಅತ್ಯಾಚಾರಕ್ಕೆ ಮರಣದಂಡನೆ ಶಿಕ್ಷೆ ಕಾನೂನು ಜಾರಿಗೊಳಿಸಿದ ಬಳಿಕ ದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂಬ ಗೆಹಲೋತ್ ಹೇಳಿಕೆಗೆ ಮಲಿವಾಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗೆಹಲೋತ್ ಅವರು ನಿರ್ಭಯಾ ಅವರನ್ನು ಗೇಲಿ ಮಾಡಿರುವ ರೀತಿಯಿಂದ ಅತ್ಯಾಚಾರ ಸಂತ್ರಸ್ತೆಯರ ಭಾವನೆಗಳಿಗೆ ಧಕ್ಕೆಯಾಗಿದೆ. ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರನ್ನು ಗಲ್ಲಿಗೇರಿಸುವ ಕಾನೂನು ಜಾರಿಗೆ ತರಬೇಕಿದ್ದರೆ ನಾವು ಸಾಕಷ್ಟು ಹೋರಾಟ ನಡೆಸಿದ್ದೇವೆ ಎಂದು ಮಲಿವಾಲ್ ಹೇಳಿರುವುದಾಗಿ ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದಂದಿನಿಂದ ದೇಶದಲ್ಲಿ ಅತ್ಯಾಚಾರ ಸಂತ್ರಸ್ತೆಯರ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ದೆಹಲಿಯಲ್ಲಿ ಶುಕ್ರವಾರ ಗೆಹಲೋತ್ ಹೇಳಿದ್ದರು.

‘ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ಕಾನೂನು ಜಾರಿಗೊಳಿಸಿದ ನಂತರ ಸಂತ್ರಸ್ತೆಯರನ್ನು ಹತ್ಯೆ ಮಾಡುವ ಘಟನೆಗಳು ಹೆಚ್ಚಾಗಿವೆ. ನಾಳೆ ತನ್ನ ವಿರುದ್ಧ ಸಾಕ್ಷಿಯಾಗಬಹುದು ಎಂಬ ಭೀತಿಯಿಂದ ಅತ್ಯಾಚಾರಿಯು ಸಂತ್ರಸ್ತೆಯನ್ನು ಹತ್ಯೆ ಮಾಡುತ್ತಾನೆ. ಇದು ದೇಶದಾದ್ಯಂತ ನಡೆಯುತ್ತಿದ್ದು, ಬಹಳ ಅಪಾಯಕಾರಿ’ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.