ನವದೆಹಲಿ: ದೆಹಲಿ ಮತ್ತು ಮಧ್ಯಪ್ರದೇಶದ ಹಿಂಸಾ ಪೀಡಿತ ಪ್ರದೇಶಗಳಲ್ಲಿ ಸರ್ಕಾರದಿಂದ ಬುಲ್ಡೋಜರ್‌ಗಳ ಬಳಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷದ ಬುಲ್ಡೋಜರ್ ಕಾರ್ಯಾಚರಣೆ ಸ್ಥಗಿತಗೊಳಿಸಿ, ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಬೇಕು' ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ರಾಷ್ಟ್ರದಲ್ಲಿ ಕಲ್ಲಿದ್ದಲು ಕೊರತೆ ಸಮಸ್ಯೆಯ ಬಗ್ಗೆ ಪ್ರಶ್ನಿಸಿರುವ ರಾಹುಲ್, ಕಲ್ಲಿದ್ದಲು ದಾಸ್ತಾನು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ಪರಿಣಾಮ ಬೀರಿದೆ ಎಂಬ ಪತ್ರಿಕೆ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
'ರಾಷ್ಟ್ರದಲ್ಲಿ 8 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಉಳಿದಿದೆ. ಇದು ಕಳೆದ 8 ವರ್ಷಗಳಲ್ಲಿ ಆಡಿದ ದೊಡ್ಡ ಮಾತುಗಳ ಫಲಿತಾಂಶವಾಗಿದೆ. ಮೋದಿ ಅವರೇ, ಹಣದುಬ್ಬರವು ಭೀತಿಯನ್ನು ಹುಟ್ಟುಹಾಕಿದೆ. ವಿದ್ಯುತ್ ಕಡಿತವು ಸಣ್ಣ ಕಾರ್ಖಾನೆಗಳನ್ನು ನಾಶ ಮಾಡಲಿದೆ. ಇದು ಹೆಚ್ಚಿನ ಉದ್ಯೋಗ ನಷ್ಟಕ್ಕೆ ದಾರಿ ಮಾಡಿಕೊಡಲಿದೆ' ಎಂದು ರಾಹುಲ್ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.
ಹಿಂಸೆಗೆ ಕಾರಣರಾಗಿದ್ದಾರೆ ಎಂಬ ಆರೋಪದಡಿ ದೆಹಲಿಯ ಜಹಾಂಗಿರ್‌ಪುರಿ ಹಾಗೂ ಮಧ್ಯ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಗೆ ಬುಲ್ಡೋಜರ್‌ಗಳನ್ನು ಬಳಕೆ ಮಾಡಲಾಗಿದೆ. ಇದನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ತಮ್ಮ ಹೃದಯದಲ್ಲಿರುವ ದ್ವೇಷದ ಮೇಲೆ ಬಿಜೆಪಿ ಬುಲ್ಡೋಜರ್ ಅನ್ನು ಹರಿಸಲಿ' ಎಂದಿದ್ದಾರೆ.
'ಇದು ಭಾರತದ ಸಂವಿಧಾನದ ಮೌಲ್ಯಗಳನ್ನು ನಾಶ ಮಾಡುವ ಕೆಲಸವಾಗಿದೆ. ಬಡವರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬಿಜೆಪಿ ಸರ್ಕಾರಗಳು ನಡೆಸುತ್ತಿರುವ ದಾಳಿಯಾಗಿದೆ. ಇದರ ಬದಲಾಗಿ ಬಿಜೆಪಿ ತನ್ನ ಎದೆಯಲ್ಲಿರುವ ದ್ವೇಷದ ಮೇಲೆ ಬುಲ್ಡೋಜರ್‌ಗಳನ್ನು ಹರಿಸಬೇಕು' ಎಂದು ಟ್ವೀಟ್‌ನಲ್ಲಿ ರಾಹುಲ್ ತಿಳಿಸಿದ್ದಾರೆ.
ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿಯ ದ್ವೇಷಪೂರಿತ ರಾಜಕಾರಣದಿಂದ ಬೀದಿಗಳು ಉರಿಯುತ್ತಿವೆಯೇ ಹೊರತು ಮನೆಗಳ ದೀಪ ಬೆಳಗುತ್ತಿಲ್ಲ' ಎಂದಿದೆ.
'ಬುಲ್ಡೋಜರ್ ಮೂಲಕ ಕೇವಲ ಮನೆಗಳನ್ನಷ್ಟೇ ನೆಲಸಮ ಮಾಡುತ್ತಿಲ್ಲ, ನಮ್ಮ ಸಂವಿಧಾನವನ್ನು ಕೆಡವಲಾಗುತ್ತಿದೆ' ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ಆರೋಪಿಸಿದೆ.
ಬಿಜೆಪಿಯ ಆಡಳಿತವು ಸಂಪೂರ್ಣವಾಗಿ ಕ್ಷೋಭೆಗೊಂಡಿದ್ದು, ಅದಕ್ಕಾಗಿ ದ್ವೇಷದ ಬುಲ್ಡೋಜರ್‌ಗಳನ್ನು ಹರಿಸಲಾಗುತ್ತಿದೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಮುಚ್ಚಿಡಲು ಬಿಜೆಪಿ ಸರ್ಕಾರ ಇಂತಹ ಕೀಳು ಮಟ್ಟದ ಕೆಲಸ ಮಾಡುತ್ತಿದೆ. ಹಾಗಾಗಿ ದ್ವೇಷದ ವಿರುದ್ಧ ಧ್ವನಿಯೆತ್ತುವುದು ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.