ನವದೆಹಲಿ: ಕೆನಡಾದ ಅಲ್ಬರ್ಟಾದಲ್ಲಿ ಖಾಲಿಸ್ತಾನಿ ಬೆಂಬಲಿಗನೊಬ್ಬ ಕತ್ತಿಯಿಂದ ದಾಳಿ ಮಾಡಲು ಯತ್ನಿಸಿದ್ದ. ಆತ ಬೀಸಿದ್ದ ಕತ್ತಿಯು ತಮ್ಮಿಂದ ಕೆಲವೇ ಇಂಚುಗಳಷ್ಟು ಹತ್ತಿರದಲ್ಲಿ ಹೋಗಿತ್ತು ಎಂದು ಆ ದೇಶದಲ್ಲಿ (ಕೆನಡಾದಲ್ಲಿ) ಭಾರತದ ರಾಯಭಾರಿಯಾಗಿದ್ದ ಸಂಜಯ್ ಕುಮಾರ್ ವರ್ಮಾ ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆ 'ಎಎನ್‌ಐ' ಜೊತೆ ಮಾತನಾಡಿರುವ ಅವರು, 'ಹೌದು, ನಮ್ಮ ಮೇಲೆ ಹಲ್ಲೆ ನಡೆಸಲು ಹಲವು ಬಾರಿ ಪ್ರಯತ್ನ ನಡೆದಿತ್ತು. ಅವರು (ಖಾಲಿಸ್ತಾನಿ ಬೆಂಬಲಿಗರು) ಕತ್ತಿ ಹಿಡಿದಿರುತ್ತಿದ್ದರು. ಅದು ಕಿರ್ಪಾನ್ (ಸಿಖ್ ಧರ್ಮದಲ್ಲಿ ವಿಶೇಷ ಮಾನ್ಯತೆ ಹೊಂದಿರುವ ಅಸ್ತ್ರ) ಆಗಿರಲಿಲ್ಲ. ಅಲ್ಬರ್ಟಾದಲ್ಲಿ ಇದ್ದಾಗ ಅವರು ಬೀಸಿದ್ದ ಕತ್ತಿ ನನ್ನ ದೇಹದಿಂದ ಕೇವಲ 2–2.5 ಇಂಚಿನಷ್ಟು ಹತ್ತಿರದವರೆಗೂ ಬಂದಿತ್ತು' ಎಂದು ಹೇಳಿದ್ದಾರೆ.
ಭಾರತವು 'ಖಾಲಿಸ್ತಾನಿ ಭಯೋತ್ಪಾದಕ' ಎಂದು ಘೋಷಿಸಿರುವ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ 2023ರ ಜೂನ್‌ನಲ್ಲಿ ಹತ್ಯೆಯಾಗಿದ್ದ.
ಭಾರತದ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ಆ ಪ್ರಕರಣದ ವಿಚಾರಣೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಇತ್ತೀಚೆಗೆ ಹೇಳಿಕೆ ನೀಡಿತ್ತು. ಅದರ ಬೆನ್ನಲ್ಲೇ ಭಾರತವು ವರ್ಮಾ ಹಾಗೂ ಇತರ ಐವರು ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.
ಗುರುವಾರ 'ಪಿಟಿಐ' ಜೊತೆ ಮಾತನಾಡಿದ್ದ ವರ್ಮಾ, 'ಖಾಲಿಸ್ತಾನಿಗಳು ಕೆನಡಾದಲ್ಲಿ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಖಾಲಿಸ್ತಾನ ಹೆಸರಿನಲ್ಲಿ ಮಾನವ ಕಳ್ಳಸಾಗಣೆ, ಮಾದಕವಸ್ತು–ಶಸ್ತ್ರಾಸ್ತ್ರ ಸಾಗಣೆ ಹಾಗೂ ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಕೃತ್ಯಗಳಿಂದ ಹಾಗೂ ಗುರುದ್ವಾರಗಳಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಆ ಹಣವನ್ನು ದುಷ್ಕೃತ್ಯಗಳಿಗೆ ಬಳಸುತ್ತಿದ್ದಾರೆ' ಎಂದು ಆರೋಪಿಸಿದ್ದರು.
'ಹೆಚ್ಚಾಗಿ ಅಳುವ ಮಗುವಿಗೆ ತಾಯಿ ಮೊದಲು ಆಹಾರ ನೀಡುತ್ತಾರೆ. ಅದೇ ರೀತಿ, ಅವರು (ಖಾಲಿಸ್ತಾನಿಗಳು) ಬೆರಳೆಣಿಕೆಯಷ್ಟಿದ್ದರೂ, ಗಮನ ಸೆಳೆಯುವುದಕ್ಕಾಗಿ ಮತ್ತು ಕೆನಡಾ ರಾಜಕೀಯ ಬೆಂಬಲಕ್ಕಾಗಿ ಹೆಚ್ಚು ಕೂಗಾಡುತ್ತಾರೆ' ಎಂದು ದೂರಿದ್ದರು.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ವಿರುದ್ಧ ನೇರ ವಾಗ್ದಾಳಿ ನಡೆಸಿ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಅವರನ್ನು ಪ್ರೋತ್ಸಾಹಿಸುವುದಕ್ಕೆ ಸಮ. ಟ್ರೂಡೊ ಅವರು ರಾಜಕೀಯ ಲಾಭಕ್ಕಾಗಿ ಖಾಲಿಸ್ತಾನಿಗಳಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಗುಡುಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.