ಹೈದರಾಬಾದ್: ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಗುಪ್ತಚರ ದಳದ (ಎಸ್‌ಐಬಿ) ಮಾಜಿ ಮುಖ್ಯಸ್ಥ ಟಿ. ಪ್ರಭಾಕರ್ ರಾವ್ ಮತ್ತು ಮಾಜಿ ವಿಶೇಷ ಕರ್ತವ್ಯ ಅಧಿಕಾರಿ ರಾಧಾ ಕೃಷ್ಣ ರಾವ್ ಅವರ ವಿರುದ್ಧ ತೆಲಂಗಾಣ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ) ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಭುಜಂಗ ರಾವ್ ಅವರನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ಪಂಜಗುತ್ತಾ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮಾಜಿ ಐಪಿಎಸ್ ಅಧಿಕಾರಿ ಪ್ರಭಾಕರ್ ರಾವ್ ಮೊದಲನೇ ಆರೋಪಿ ಮತ್ತು ರಾಧಾ ಕೃಷ್ಣ ರಾವ್ ಎರಡನೇ ಆರೋಪಿ ಎಂದು ಹೇಳಿದ್ದಾರೆ. ಲುಕ್‌ಔಟ್ ನೋಟಿಸ್ ಬೆನ್ನಲ್ಲೇ ಇಬ್ಬರೂ ದೇಶ ತೊರೆದಿದ್ದಾರೆ.
ವಿರೋಧ ಪಕ್ಷಗಳ ನಾಯಕರು ಮತ್ತು ಇತರರ ಫೋನ್ ಕದ್ದಾಲಿಸಲು ಪ್ರಭಾಕರ್ ಅವರ ಸೂಚನೆಗಳನ್ನು ಮತ್ತೊಬ್ಬ ಆರೋಪಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಣೀತ ರಾವ್ ಅನುಸರಿಸಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ಪ್ರಣೀತ್ ರಾವ್ ಅವರನ್ನು ಮಾ.13ರಂದು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿಚಾರಣೆ ವೇಳೆ ಪ್ರಣೀತ್ ರಾವ್, ಬಿಆರ್‌ಎಸ್ ಆಡಳಿತಾವಧಿಯಲ್ಲಿ ಅಪಾರ ಪ್ರಮಾಣದ ದತ್ತಾಂಶ ಮತ್ತು ಕನಿಷ್ಠ 10 ಲಕ್ಷ ಸಂವಹನ ದಾಖಲೆಯನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ, ಈಗ ಮುಖ್ಯಮಂತ್ರಿಯಾಗಿರುವ ರೇವಂತ್ ರೆಡ್ಡಿ, ಅವರ ಸಂಬಂಧಿಕರು, ಅಧಿಕಾರಿಗಳು ಮತ್ತು ಕೆಲ ಪತ್ರಕರ್ತರ ಸಂವಹನ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಕಳೆದ ಡಿಸೆಂಬರ್ 3ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಮಾಹಿತಿ ಇದ್ದ ಹಾರ್ಡ್ ಡ್ರೈವ್ ಅನ್ನು ಪ್ರಣೀತ್ ರಾವ್ ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.