ADVERTISEMENT

T20 ವಿಶ್ವಕಪ್‌ ಫೈನಲ್‌ | ಪಾಕ್‌ ಪತನಕ್ಕೆ ಕಾರಣನಾದ ಆಟಗಾರನ ನೆರೆ ಪರಿಹಾರ ಕಾರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜುಲೈ 2023, 10:54 IST
Last Updated 20 ಜುಲೈ 2023, 10:54 IST
ಜೋಗಿಂದರ್ ಶರ್ಮ
ಜೋಗಿಂದರ್ ಶರ್ಮ   

ನವದೆಹಲಿ: ಕ್ರಿಕೆಟ್‌ ಪ್ರೇಮಿಗಳಾರೂ 2007ರ ಟಿ–20 ವಿಶ್ವಕಪ್‌ನ ಕೊನೆಯ ಓವರ್‌ ಅನ್ನು ಮರೆತಿರಲು ಸಾಧ್ಯವೇ ಇಲ್ಲ. ಎಂ.ಎಸ್.ಧೋನಿ ನಾಯಕತ್ವದ ಭಾರತ ತಂಡ ಪಾಕಿಸ್ತಾನದ ಎದುರಿನ ಫೈನಲ್ ಪಂದ್ಯವನ್ನು ಗೆದ್ದ ರೋಚಕತೆ ಎಲ್ಲರ ಕಣ್ಣಲ್ಲೂ ಹಾಗೇ ಇದೆ. 

ಭಾರತ ಕಲೆಹಾಕಿದ 157 ರನ್‌ಗಳನ್ನು ಬೆನ್ನತ್ತಿದ ಪಾಕಿಸ್ತಾನ ಕಪ್‌ ಗೆಲುವಿನ ಸಮೀಪದಲ್ಲಿತ್ತು. ಕೊನೆಯ ಓವರನಲ್ಲಿ 13 ರನ್‌ ಕಲೆಹಾಕಬೇಕಿತ್ತು. ಆದರೆ ಅದರ ಬಳಿ ಇದ್ದದ್ದು ಒಂದೇ ವಿಕೆಟ್‌. ಕೊನೆಯ ಓವರ್ ಬೌಲ್ ಮಾಡಲು ಕ್ಯಾಪ್ಟನ್‌ ಧೋನಿ ಆಯ್ಕೆ ಮಾಡಿಕೊಂಡಿದ್ದು ಜೋಗಿಂದರ್ ಶರ್ಮ ಅವರನ್ನು. ಮೂರನೇ ಬಾಲ್‌ನಲ್ಲಿ ಮಿಸ್ಬಾ ಉಲ್‌ ಹಕ್‌ ಅವರ ವಿಕೆಟ್‌ ಪಡೆದ ಜೋಗಿಂದರ್‌ ಎರಡೂ ಕೈಗಳನ್ನು ಹೊರಕ್ಕೆ ಚಾಚಿ ಮೈದಾನದಲ್ಲಿ ಓಡಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆ ಪಂದ್ಯವನ್ನು ಭಾರತ 5 ರನ್‌ಗಳಿಂದ ಗೆದ್ದುಕೊಂಡಿತು.

ಅದೇ ಜೋಗಿಂದರ್ ಶರ್ಮ ಈಗ ಸುದ್ದಿಯಲ್ಲಿದ್ದಾರೆ. ಅವರೀಗ ಕ್ರಿಕೆಟರ್ ಅಲ್ಲ. ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಸಿಪಿ ಆಗಿದ್ದಾರೆ. ಇತ್ತೀಚೆಗೆ ದೆಹಲಿ ಸುತ್ತಮುತ್ತ ಸುರಿದ ಭಾರೀ ಮಳೆಯಿಂದ ಸೃಷ್ಟಿಯಾದ ನೆರೆಯಲ್ಲಿ ಸಿಲುಕಿದವರನ್ನು ಅಂಬಾಲಾ ಬಳಿ ರಕ್ಷಿಸಿದ ತಂಡದಲ್ಲಿ ಜೋಗಿಂದರ್ ಕೂಡಾ ಇದ್ದರು. 

ADVERTISEMENT

ಇದನ್ನು ಜೋಗಿಂದರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಭಸವಾಗಿ ಹರಿಯುವ ನೀರಿನ ನಡುವೆ ಸಮವಸ್ತ್ರ ಧರಿಸಿ ನಿಂತಿರುವ ಅವರು ಪರಿಹಾರ ಕಾರ್ಯಗಳ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸುತ್ತಿದ್ದಾರೆ. 

2007ರಲ್ಲಿ ಟಿ–20 ವಿಶ್ವಕಪ್‌ ಗೆದ್ದ ಭಾರತ ತಂಡ 2011ರ ವಿಶ್ವಕಪ್‌ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಎಂ.ಎಸ್.ಧೋನಿ ನಾಯಕತ್ವದಲ್ಲಿ ಗೆದ್ದಿತು. ನಂತರ ಯಾವುದೇ ಕಪ್‌ ಗೆಲ್ಲದ ಭಾರತಕ್ಕೆ 2023ರಲ್ಲಿ ಭಾರತದಲ್ಲೇ ನಡೆಯಲಿರುವ ವಿಶ್ವಕಪ್‌ ಪಂದ್ಯವನ್ನು ಗೆಲ್ಲುವ ಅವಕಾಶ ಒದಗಿ ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.