ADVERTISEMENT

ವಾಯುಪಡೆ ಅಧಿಕಾರಿಗಳ ಹತ್ಯೆ: ಮಲಿಕ್ ವಿರುದ್ಧ 30 ವರ್ಷಗಳ ನಂತರ ಆರೋಪಪಟ್ಟಿ

ಜುಲ್ಫಿಕರ್ ಮಜಿದ್
Published 17 ಮಾರ್ಚ್ 2020, 5:21 IST
Last Updated 17 ಮಾರ್ಚ್ 2020, 5:21 IST
ಯಾಸಿನ್ ಮಲಿಕ್
ಯಾಸಿನ್ ಮಲಿಕ್    

ಶ್ರೀನಗರ: 1990 ಜನವರಿ 25 ರಂದು ನಡೆದ ಉಗ್ರ ದಾಳಿಯಲ್ಲಿ ಭಾರತೀಯ ವಾಯುಪಡೆಯ ನಾಲ್ವರು ಅಧಿಕಾರಿಗಳು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ 30 ವರ್ಷಗಳ ಬಳಿಕಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ಇತರ ನಾಲ್ವರ ವಿರುದ್ಧ ಟಾಡಾ ನ್ಯಾಯಾಲಯ ಆರೋಪಪಟ್ಟಿ ದಾಖಲಿಸಿದೆ.

ಆರ್‌ಪಿಸಿ ಸೆಕ್ಷನ್ 302, 307,ಟಾಡಾ ಕಾಯ್ದೆ 1987ರ (ವಿಧ್ವಂಸಕ ಕೃತ್ಯ ತಡೆ ಕಾಯ್ದೆ) ಸೆಕ್ಷನ್ 3(3) ಮತ್ತು ಸೆಕ್ಷನ್4(1),ಶಸ್ತ್ರಾಸ್ತ್ರ ಕಾಯ್ದೆ 1959 ಸೆಕ್ಷನ್ 7/27 ಮತ್ತು ಆರ್‌ಪಿಸಿ ಸೆಕ್ಷನ್ 120-ಬಿ ಅಡಿಯಲ್ಲಿಮಲಿಕ್ ವಿರುದ್ಧ ಆರೋಪ ದಾಖಲಾಗಿದೆ.

ನಿಷೇಧಿತ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್) ನಾಯಕ ಮಲಿಕ್‌ಗೆ ಈ ವಿವರಗಳನ್ನು ಇಮೇಲ್ ಮುಖಾಂತರ ತಿಳಿಸಿದ್ದು, ಆರೋಪ ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮಲಿಕ್ ವಿರುದ್ಧ ದೂರು ದಾಖಲಿಸಲು ಮತ್ತು ವಿಚಾರಣೆ ನಡೆಸಲು ಕಳೆದ ವಾರವೇ ನ್ಯಾಯಾಲಯ ಹೇಳಿತ್ತು. ಮುಂದಿನ ವಿಚಾರಣೆ ಮಾರ್ಚ್ 30ರಂದು ನಡೆಯಲಿದೆ.

ADVERTISEMENT

1990 ಜನವರಿ 25ರಂದು ಬೆಳಗ್ಗೆ ಶ್ರೀನಗರದ ಹೊರವಲಯದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಸ್ಕ್ವಾಡ್ರನ್ ನಾಯಕ ರವಿ ಖನ್ನಾ ಸೇರಿದಂತೆ ವಾಯುಪಡೆಯ ನಾಲ್ವರು ಅಧಿಕಾರಿಗಳು ಹತ್ಯೆಯಾಗಿದ್ದರು. ಹಲವಾರು ಮಂದಿಗೆ ಗಾಯಗಳಾಗಿತ್ತು. ತನಿಖೆ ನಡೆಸಿದಾಗ ದಾಳಿಯಲ್ಲಿ ಮಲಿಕ್ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

1989ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಮುಫ್ತಿ ಮುಹಮ್ಮದ್ ಸಯ್ಯದ್ ಪುತ್ರಿ ರುಬಯಾ ಸಯ್ಯದ್‌ ಅಪಹರಣ ಪ್ರಕರಣದಲ್ಲಿಯೂ ಮಲಿಕ್ ಕೈವಾಡವಿದೆ. ಈ ಪ್ರಕರಣದ ವಿಚಾರಣೆ ಮಾರ್ಚ್ 20ರಂದು ನಡೆಯಲಿದೆ.

ಪ್ರತಿ ದಿನ ವಿಚಾರಣೆ ನಡೆಸುವಂತೆ ಸಿಬಿಐ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು. 1987ರ ವಿವಾದಿತ ವಿಧಾನಸಭಾ ಚುನಾವಣೆ ನಂತರ 1989ರಲ್ಲಿ ಮಲಿಕ್ ಜೆಕೆಎಲ್‌ಎಫ್ ಸಂಘಟನೆ ಸೇರಿದ್ದನು. 1990 ಮಾರ್ಚ್ 31ರಂದು ಸಂಘಟನೆಯ ಮುಖ್ಯಸ್ಥ ಅಶ್ಫಾಕ್ ಮಜೀದ್ ಹತ್ಯೆ ನಂತರ ಮಲಿಕ್ ಜೆಕೆಎಲ್‌ಎಫ್ ನಾಯಕನಾದನು.

ಟಾಡಾ ನ್ಯಾಯಾಲಯಪ್ರಕರಣ ಕೈಗೆತ್ತಿಕೊಳ್ಳುವ ಮುನ್ನ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಕಳೆದ ವರ್ಷ ಈತನನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಬಂಧಿಸಿದ್ದು, ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.