ADVERTISEMENT

ಬಿಬಿಸಿ ಸಾಕ್ಷ್ಯಚಿತ್ರ: ಕಠಿಣ ಕ್ರಮಕ್ಕೆ ಗೋವಾ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಪಿಟಿಐ
Published 21 ಜುಲೈ 2023, 16:08 IST
Last Updated 21 ಜುಲೈ 2023, 16:08 IST
ಬಿಬಿಸಿ
ಬಿಬಿಸಿ    

ಪಣಜಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಬಿಜೆಪಿ ಶಾಸಕ ಕೃಷ್ಣ ಸಾಲ್ಕರ್‌ ಅವರು ಮಂಡಿಸಿದ್ದ ಸದಸ್ಯರ ಖಾಸಗಿ ನಿರ್ಣಯವನ್ನು ಗೋವಾ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.

2002ರ ಗುಜರಾತ್‌ ಗಲಭೆಯ ಕುರಿತು ಬಿಬಿಸಿ ಎರಡು ಭಾಗಗಳಲ್ಲಿ ನಿರ್ಮಿಸಿದ್ದ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರದಲ್ಲಿ ಮೋದಿ ಅವರನ್ನು ಟೀಕಿಸಲಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರವು ಅದನ್ನು ನಿಷೇಧಿಸಿತ್ತು.

‘ಸಾಕ್ಷ್ಯಚಿತ್ರದಲ್ಲಿ 2002ರಲ್ಲಿ ನಡೆದ ಘಟನೆಗಳನ್ನು ದುರುದ್ದೇಶಪೂರ್ವಕವಾಗಿ ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಕಳಂಕ ತರಲು ಯತ್ನಿಸಲಾಗಿದೆ’ ಎಂದು ಕೃಷ್ಣ ಸಾಲ್ಕರ್‌ ಅವರು ನಿರ್ಣಯದಲ್ಲಿ ಹೇಳಿದ್ದಾರೆ.

ADVERTISEMENT

‘ಬಿಬಿಸಿಯು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಅದು ಭಾರತ ಸರ್ಕಾರದ ವಿರುದ್ಧ ಗುಪ್ತ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುತ್ತಿದೆ’ ಎಂದೂ ಅವರು ಆರೋಪಿಸಿದ್ದಾರೆ.

‘ಈ ಸಾಕ್ಷ್ಯಚಿತ್ರವು ಭಾರತದಲ್ಲಿ ಲಭ್ಯವಿಲ್ಲದ ಕಾರಣ ಈ ಕುರಿತು ಸದನದಲ್ಲಿ ಚರ್ಚಿಸುವ ಅಗತ್ಯವಿಲ್ಲ’ ಎಂದು ವಿರೋಧಪಕ್ಷದ ನಾಯಕ ಯುರಿ ಅಲೆಮಾವೋ ಹೇಳಿದರು.

ಈ ವಿಚಾರದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಇಲ್ಲದ ಕಾರಣ ಈ ನಿರ್ಣಯವನ್ನು ಹಿಂಪಡೆಯಿರಿ ಎಂದು ಅವರು ಮನವಿ ಮಾಡಿದರು.

‘ಪ್ರಧಾನಿಯವರ ಪ್ರತಿಷ್ಠೆಗೆ ಧಕ್ಕೆ ತರಲು ಯತ್ನಿಸಿರುವ ಕಾರಣ ಈ ಸಾಕ್ಷ್ಯಚಿತ್ರ ಭಾರತದಲ್ಲಿ ಪ್ರಸಾರವಾಗಿಲ್ಲ’ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.