ADVERTISEMENT

‘ಪಾನ್ಸರೆ ಹತ್ಯೆಯ ತನಿಖೆ: ಎಟಿಎಸ್‌ಗೆ ವರ್ಗಾಯಿಸುವ ಕುರಿತು ತೀರ್ಮಾನ ಕೈಗೊಳ್ಳಿ’

ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ಸೂಚನೆ

ಪಿಟಿಐ
Published 21 ಜುಲೈ 2022, 14:33 IST
Last Updated 21 ಜುಲೈ 2022, 14:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ಎಟಿಎಸ್‌ಗೆ ವರ್ಗಾಯಿಸುವಂತೆ ಪಾನ್ಸರೆ ಅವರ ಸೊಸೆ ಮೇಘಾ ಮನವಿ ಮಾಡಿದ್ದು, ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಿ’ ಎಂದು ಬಾಂಬೆ ಹೈಕೋರ್ಟ್‌ ಗುರುವಾರ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.

‘ಈ ಕುರಿತು ತೀರ್ಮಾನ ಕೈಗೊಳ್ಳಲು ಹಾಗೂಈವರೆಗೂ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ನ್ಯಾಯಾಲಯಕ್ಕೆ ವಿವರವಾದ ವರದಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಶೋಕ್‌ ಮುಂಡರಗಿ ಮನವಿ ಮಾಡಿದರು.

‘ಇನ್ನು ಒಂದು ವಾರ ಸಮಯ ನೀಡುತ್ತೇವೆ. ಅಷ್ಟರೊಳಗೆ ನಿರ್ಧಾರ ತಿಳಿಸಬೇಕು. ವರದಿಯನ್ನೂ ಸಲ್ಲಿಸಬೇಕು. ಮತ್ತೆ ವಿಳಂಬ ಮಾಡಿದರೆ ಸಹಿಸುವುದಿಲ್ಲ’ ಎಂದು ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ಶರ್ಮಿಳಾ ದೇಶಮುಖ್‌ ಅವರಿದ್ದ ವಿಭಾಗೀಯ ಪೀಠ ಹೇಳಿತು.

ADVERTISEMENT

‘ರಾಜ್ಯ ಸರ್ಕಾರ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನ್ಯಾಯಾಲಯ ಆದೇಶ ಅಥವಾ ನಿರ್ದೇಶನ ನೀಡಿದಾಗ ಮಾತ್ರ ಈ ವಿಚಾರದಲ್ಲಿ ಕಾರ್ಯಪ್ರವೃತ್ತವಾಗುತ್ತದೆ’ ಎಂದು ಅರ್ಜಿದಾರರ ಪರ ವಕೀಲ ಅಭಯ್‌ ನೇವಗಿ ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದಮುಂಡರಗಿ, ‘ಅವರು ಹೇಳುತ್ತಿರುವುದು ಸುಳ್ಳು. ಸರ್ಕಾರವು ತನಿಖೆಯನ್ನು ಗಂಭೀರವಾಗಿಯೇ ಪರಿಗಣಿಸಿದೆ’ ಎಂದು ಸ್ಪಷ್ಟಪಡಿಸಿದರು.

ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ ಸಂಬಂಧ ಸಿಬಿಐಯಿಂದ ಬಂಧಿತನಾಗಿರುವ ಆರೋಪಿ ವೀರೇಂದ್ರ ತಾವಡೆ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಪೀಠವು ಒಂದು ವಾರ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.