ನವದೆಹಲಿ: ಕಠುವಾ ಅತ್ಯಾಚಾರ ಪ್ರಕರಣ ಸಂಬಂಧ ಸಾಂಬಾ ಪೊಲೀಸ್ ಠಾಣೆಯಲ್ಲಿರುವ ಪ್ರಮುಖ ಸಾಕ್ಷಿ ತಾಲೀಬ್ ಹುಸೈನ್ ಮೇಲೆ ಸೋಮವಾರ ಹಲ್ಲೆ ನಡೆದಿದೆ.
ಊಟವನ್ನು ಬಡಿಸುತ್ತಿದ್ದ ವೇಳೆ ಇಬ್ಬರು ಪೊಲೀಸರು ಹುಸೇನ್‌ಗೆ ಹೊಡೆದಿದ್ದಾರೆ. ತಲೆಯನ್ನು ಹಿಡಿದು ಗೋಡೆಗೆ ಗುದ್ದಿದ್ದಾರೆ. ಅಲ್ಲಿದ್ದ ಬೇರೆ ಪೊಲೀಸರು ಆತನ ರಕ್ಷಣೆಗೆ ಬರುವ ಬದಲು ಅವರ ಜತೆ ಸೇರಿ ಹಲ್ಲೆಗೈದಿದ್ದಾರೆ. ಹಲವು ಬಾರಿ ಥಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿರುವುದಾಗಿ ದಿ ವೈರ್ ವರದಿ ಮಾಡಿದೆ.
ಸೋಮವಾರ ಮಧ್ಯಾಹ್ನ ಹುಸೈನ್ ಅನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗ ಈಗ ಭೇಟಿ ಮಾಡಲು ಸಾಧ್ಯವಿಲ್ಲ ಎಂದರು. ಆಗ ಏನೋ ಅನಾಹುತವಾಗಿರುವ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಹುಸೈನ್‌ಗೆಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಿದರು. ಬಳಿಕ ಹುಸೇನ್ ಅವರನ್ನು ಸಾಂಬಾದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಯಿತು. ಈ ವೇಳೆ ಅವರ ದೇಹವೆಲ್ಲಾ ರಕ್ತಮಯವಾಗಿತ್ತು. ತಲೆಗೆ ಬಲವಾದ ಹೊಡೆತ ಬಿದ್ದಿತ್ತು. ಗಂಭೀರ ಗಾಯಗಳಾಗಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿ ಸಂಬಂಧಿಕರು ಹೇಳಿದ್ದಾರೆ.
’ತಾಲೀಬ್ ಹುಸೈನ್ ಅನ್ನು ಕಳೆದ ವಾರ ಬಂಧಿಸಲಾಗಿದ್ದು, ಸಾಂಬಾ ಪೊಲೀಸ್ ಠಾಣೆಯಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ತಲೆಗೆ ಹೊಡೆತ ಬಿದ್ದ ಪರಿಣಾಮ ಸಾಂಬಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವನು ಕಠುವಾ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ’ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಆರೋಪವನ್ನು ಅಲ್ಲಗಳೆದಿರುವ ಜಮ್ಮು ಕಾಶ್ಮೀರದ ಡಿಜಿಪಿ ಎಸ್. ಪಿ ವೇದ್, ’ಹತಾಶೆಗೆ ಒಳಗಾಗಿದ್ದ ಹುಸೈನ್ ತಾನಾಗಿಯೇ ತಲೆಗೆ ಘಾಸಿ ಮಾಡಿಕೊಂಡಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಹೇಳಿದ್ದಾರೆ.
ಈ ಮಧ್ಯೆ, ನ್ಯಾಯಾಂಗ ಬಂಧನದಲ್ಲಿರುವ ಹುಸೇನ್ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಗ್ರೇಟರ್ ಕಾಶ್ಮೀರ್ ವರದಿ ಮಾಡಿದೆ.
ಎಂಟು ವರ್ಷದ ಬಾಲಕಿಯಮೇಲೆ ಕಠುವಾದಲ್ಲಿ ಜನವರಿ 10ರಂದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈಯ್ಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.