ಮಥುರಾ: ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷದ ನಡೆಯಲಿರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ ಎಂದು ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಬುಧವಾರ ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವ ಪಕ್ಷವನ್ನು ರಾಜ್ಯದ ಜನರು ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದರು.
ಇಲ್ಲಿ ಆಶೀರ್ವಾದ ಪಥ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಚೌಧರಿ, ಉತ್ತರ ಪ್ರದೇಶದ ಭವಿಷ್ಯವನ್ನು ಬದಲಾಯಿಸುವ ಕೀಲಿಯು ರೈತರು ಮತ್ತು ಯುವ ಸಮುದಾಯದ ಕೈಯಲ್ಲಿದೆ ಎಂದು ಹೇಳಿದರು.
‘ಆರ್‌ಎಲ್‌ಡಿ ಮತ್ತು ಸಮಾಜವಾದಿ ಪಕ್ಷದ ನಡುವೆ ಮೈತ್ರಿಗಾಗಿ ಮಾತುಕತೆ ನಡೆಯುತ್ತಿದೆ’ ಎಂದು ಅವರು ರ್‍ಯಾಲಿಯಲ್ಲಿ ತಿಳಿಸಿದರು.
ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಉತ್ತರ ಪ್ರದೇಶ ರಾಜ್ಯವು ಯಾವ್ಯಾವ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕೇಳಿದರು. ‘ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತು ಆಡಳಿತ ಪಕ್ಷದ ನಾಯಕರ ಸುಳ್ಳು ಹೇಳಿಕೆಗಳೇ ಅವರ ಸಾಧನೆಯಾಗಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.