ಅಹಮದಾಬಾದ್: ‘ಭಾರತ ಮತ್ತು ಚೀನಾ ನಡುವಿನ ಮಾತುಕತೆಗಳು ಉತ್ತಮ ವಾತಾವರಣದಲ್ಲಿ, ಸುಗಮವಾಗಿ ನಡೆಯುತ್ತಿವೆ. ಭಾರತ ಎಂದಿಗೂ ತಲೆಬಾಗುವುದಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಅಹಮದಾಬಾದ್‌ಗೆ ಆಗಮಿಸಿರುವ ಸಿಂಗ್, ‘ಭಾರತವು ಇನ್ನು ಮುಂದೆ ದುರ್ಬಲ ರಾಷ್ಟ್ರವಲ್ಲ. ಮಿಲಿಟರಿ ದೃಷ್ಟಿಕೋನದಿಂದಲೂ ಪ್ರಬಲ ರಾಷ್ಟ್ರವಾಗಿದೆ. ತನ್ನ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಲು ಬಯಸುತ್ತದೆ’ ಎಂದು ಹೇಳಿದರು.
ಚೀನಾ ಆಕ್ರಮಣ ಸಂಬಂಧ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ರಾಜನಾಥ್ ಸಿಂಗ್ ಈ ರೀತಿ ಪ್ರತಿಕ್ರಿಯಿಸಿದರು.
‘ನಾವು ಮಾತುಕತೆಯ ಫಲಿತಾಂಶಕ್ಕಾಗಿ ಕಾಯಬೇಕೆನ್ನುವುದು ನನ್ನ ಭಾವನೆ. ಆದರೆ, ಭಾರತವು ಎಲ್ಲಿಯೂ ತಲೆಬಾಗಿಲ್ಲ ಮತ್ತು ಎಂದಿಗೂ ತಲೆಬಾಗುವುದಿಲ್ಲವೆಂದು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ’ ಎಂದು ಸಿಂಗ್ ಹೇಳಿದರು.
ಭಾರತದ ರಕ್ಷಣಾ ರಫ್ತು 2014ರಲ್ಲಿ ₹600 ಕೋಟಿ ಇತ್ತು. ಇದು 2023-24ರ ಆರ್ಥಿಕ ವರ್ಷದಲ್ಲಿ ₹21,000 ಕೋಟಿಯ ಗಡಿ ದಾಟಿದೆ. ಇದು ಮುಂದೆಯೂ ಹೆಚ್ಚಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಕ್ಷಣಾ ಸಾಮಗ್ರಿಗಳು, ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳು, ಬಾಂಬ್‌ಗಳು ಅಥವಾ ಯುದ್ಧ ಟ್ಯಾಂಕ್‌ಗಳನ್ನು ಭಾರತದಲ್ಲಿ ಭಾರತೀಯರೇ ತಯಾರಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು ಮೋದಿ ಸರ್ಕಾರದ ಬದ್ಧತೆಯಾಗಿತ್ತು. ಇಂದು ನಾವು ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಕ್ಷಣಾ ಉತ್ಪಾದನೆಯನ್ನು ಸಾಧಿಸಿದ್ದೇವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.