ಬೆಂಗಳೂರು: ನೂತನ ರಾಜಕೀಯ ಪಕ್ಷ ರಚಿಸಿರುವ ನಟ ವಿಜಯ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪರೋಕ್ಷವಾಗಿ ಟೀಕಿಸಿದ್ದಾರೆ.
‘ಹೊಸ ಪಕ್ಷ ಸ್ಥಾಪಿಸಿದವರೆಲ್ಲಾ ಡಿಎಂಕೆಯನ್ನು ನಾಶ ಮಾಡುವ ಉದ್ದೇಶ ಹೊಂದಿರುತ್ತಾರೆ. ಯಾಕೆಂದರೆ ಅವರಿಗೆ ಡಿಎಂಕೆಯ ಬೆಳವಣಿಗೆ ಸಹಿಸಲು ಆಗುವುದಿಲ್ಲ’ ಎಂದು ಕೊಳತ್ತೂರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದನ್ನು ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಅವರಿಗೆ ನಾನು ಹೇಳಬಯಸುವುದಿಷ್ಟೇ, ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಸರ್ಕಾರದ ಸಾಧನೆಯನ್ನು ನೋಡಿ. ಜನರಿಗೆ ಒಳಿತು ಮಾಡುವುದೇ ನಮ್ಮ ಉದ್ದೇಶ. ಅನಗತ್ಯ ವಿಷಯಗಳಿಗೆ ಪ್ರತ್ಯುತ್ತರ ನೀಡುತ್ತಾ ಸಮಯವನ್ನು ಪೋಲು ಮಾಡಲು ನಾವು ಬಯಸುವುದಿಲ್ಲ. ಆ ವಿಚಾರಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡಿಯೂ ಇಲ್ಲ’ ಎಂದು ಹೇಳಿದ್ದಾರೆ.
ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ರಾಜ್ಯದ ಡಿಎಂಕೆ ಹಾಗೂ ಕೇಂದ್ರದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿತ್ತು.
ಅಕ್ಟೋಬರ್ 27ರಂದು ನಡೆದ ಬೃಹತ್ ಸಮಾವೇಶದಲ್ಲಿ ಅಬ್ಬರಿಸಿದ್ದ ನಟ ವಿಜಯ್, ರಾಜ್ಯ ಸರ್ಕಾರ ಜಾತಿ ಗಣತಿಯನ್ನು ಮಾಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ ಸಿದ್ಧಾಂತವು ಜಾತ್ಯತೀತತೆ ಹಾಗೂ ಸಾಮಾಜಿಕ ನಾಯವನ್ನು ಆಧರಿಸಿದ್ದು ಆಗಿರಲಿದೆ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.