ಚೆನ್ನೈ: ಟೊರಾಂಟೊದಲ್ಲಿ ನಡೆದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ವಿಜೇತರಾದ ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಅವರು ₹75 ಲಕ್ಷ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ.
ರಾಜ್ಯ ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್, ಉನ್ನತ ಅಧಿಕಾರಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಗುಕೇಶ್ ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. ಗುಕೇಶ್ ಅವರ ಸಾಧನೆಗೆ ಸಿಎಂ ಅಭಿನಂದನೆ ಸಲ್ಲಿಸಿದರು.
ರಾಜ್ಯ ಸರ್ಕಾರದ ಪ್ರೋತ್ಸಾಹಧನ ಮತ್ತು ಬೆಂಬಲಕ್ಕೆ ಗುಕೇಶ್ ಧನ್ಯವಾದ ಅರ್ಪಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸ್ಟಾಲಿನ್, ‘ಯುವಜನತೆ ಶಿಕ್ಷಣದೊಂದಿಗೆ ತಮ್ಮ ಆಯ್ಕೆಯ ಕ್ರೀಡೆಯನ್ನು ಅಭ್ಯಾಸ ಮಾಡುವುದನ್ನು ದಿನಚರಿಯಾಗಿ ರೂಢಿಸಿಕೊಳ್ಳಬೇಕು. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಎಚ್ಚರವಾಗಿ ಮತ್ತು ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಭಾನುವಾರ ಮುಕ್ತಾಯಗೊಂಡ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 14ನೇ ಹಾಗೂ ಅಂತಿಮ ಸುತ್ತಿನಲ್ಲಿ 17 ವರ್ಷದ ಆಟಗಾರ ಗುಕೇಶ್, ಅಮೆರಿಕದ ಹಿಕಾರು ನಕಾಮುರಾ ಜೊತೆ ಅಂತಿಮ ಸುತ್ತಿನ ಪಂದ್ಯವನ್ನು ‘ಡ್ರಾ’ ಮಾಡಿಕೊಂಡರು. ಇದರೊಂದಿಗೆ ಟೂರ್ನಿ ಗೆದ್ದು ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 40 ವರ್ಷಗಳ ಹಿಂದೆ ಗ್ಯಾರಿ ಕ್ಯಾಸ್ಪರೋವ್ ಅವರು ನಿರ್ಮಿಸಿದ್ದ ದಾಖಲೆ ಮುರಿದಿದ್ದಾರೆ. ಈ ಗೆಲುವಿನೊಂದಿಗೆ ವರ್ಷಾಂತ್ಯದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.