ADVERTISEMENT

ವಿರೋಧ ಪಕ್ಷಗಳನ್ನು ಶತ್ರುಗಳಂತೆ ನೋಡಬೇಡಿ: ಕೇಂದ್ರಕ್ಕೆ ತಮಿಳುನಾಡು ಸಿಎಂ ಚಾಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2024, 9:51 IST
Last Updated 27 ಜುಲೈ 2024, 9:51 IST
<div class="paragraphs"><p>ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ&nbsp;ಪ್ರಧಾನಿ ನರೇಂದ್ರ ಮೋದಿ</p></div>

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ

   

ಚೆನ್ನೈ: ನೀತಿ ಆಯೋಗದ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಕಿಡಿಕಾರಿದ್ದಾರೆ. ವಿರೋಧ ಪಕ್ಷಗಳನ್ನು ಶತ್ರುಗಳಂತೆ ನೋಡಬೇಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆ ಬಹಿಷ್ಕರಿಸಿರುವುದಕ್ಕೆ ಸಂಬಂಧಿಸಿದಂತೆ ಎಕ್ಸ್‌/ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ಟಾಲಿನ್‌, 'ಇದು ಒಕ್ಕೂಟ ಸರ್ಕಾರವೇ?, ಇದು ಮುಖ್ಯಮಂತ್ರಿಯನ್ನು ನಡೆಸಿಕೊಳ್ಳುವ ರೀತಿಯೇ? ವಿರೋಧ ಪಕ್ಷಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಿಭಾಜ್ಯ ಅಂಗ ಮತ್ತು ಅವರ ಸದ್ದಡಗಿಸಲು ಶತ್ರುಗಳಂತೆ ನಡೆಸಿಕೊಳ್ಳಬಾರದು ಎಂಬುದನ್ನು ಬಿಜೆಪಿ ನೃತೃತ್ವದ ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು' ಎಂದಿದ್ದಾರೆ.

ADVERTISEMENT

'ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಮಾತುಕತೆಗಳು ಮತ್ತು ಎಲ್ಲರ ಅಭಿಪ್ರಾಯಗಳಿಗೆ ಗೌರವ ನೀಡುವುದು ಅತ್ಯಗತ್ಯ' ಎಂದೂ ಹೇಳಿದ್ದಾರೆ.

ಸಭೆಯಲ್ಲಿ ತಾರತಮ್ಯ: ಮಮತಾ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಿಂದ ಹೊರಬಂದ ಬಳಿಕ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಾನು ಸಭೆ ಬಹಿಷ್ಕರಿಸಿ ಹೊರಬಂದಿದ್ದೇನೆ. ಚಂದ್ರಬಾಬು ನಾಯ್ಡು ಅವರಿಗೆ ಸಭೆಯಲ್ಲಿ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸಗಢ ಮುಖ್ಯಮಂತ್ರಿಗಳು 10–12 ನಿಮಿಷ ಮಾತನಾಡಿದರು. 5 ನಿಮಿಷ ಮಾತನಾಡುತ್ತಿದ್ದಂತೆಯೇ ನನ್ನನ್ನು ತಡೆದರು. ಇದು ಅನ್ಯಾಯ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ, ವಿರೋಧ ಪಕ್ಷಗಳ ಕಡೆಯಿಂದ ನಾನು ಮಾತ್ರವೇ ಸಭೆಯನ್ನು ಪ್ರತಿನಿಧಿಸಿದ್ದೆ' ಎಂದಿದ್ದಾರೆ

ಎನ್‌ಡಿಎ ಮಿತ್ರ ಪಕ್ಷಗಳನ್ನು ಹೊರತುಪಡಿಸಿ ಬೇರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್‌ನಲ್ಲಿ ತಾರತಮ್ಯ ಮಾಡಲಾಗಿದೆ ಎಂದೂ ದೂರಿದ್ದಾರೆ.

'ಇದು ರಾಜಕೀಯ ತಾರತಮ್ಯದಿಂದ ಕೂಡಿದ ಬಜೆಟ್‌. ಇತರ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿರುವುದು ಏಕೆ ಎಂದು ಸಭೆಯಲ್ಲಿ ಕೇಳಿದೆ. ನೀತಿ ಆಯೋಗಕ್ಕೆ ಹಣಕಾಸಿನ ದೃಷ್ಟಿಯಿಂದ ಯಾವುದೇ ಅಧಿಕಾರವಿಲ್ಲ. ಹೀಗಿರುವಾಗ ಆಯೋಗ ಯಶಸ್ವಿಯಾಗುವುದು ಹೇಗೆ? ಹಣಕಾಸು ಅಧಿಕಾರ ನೀಡಿ ಇಲ್ಲವೇ ಯೋಜನಾ ಆಯೋಗವನ್ನೇ ಪುನಃ ಸ್ಥಾಪಿಸಿ' ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.