ಚೆನ್ನೈ: ಡಿಎಂಕೆಯ ಮಾಜಿ ಮುಖ್ಯಸ್ಥ ದಿ. ಎಂ.ಕರುಣಾನಿಧಿ ಅಂದು ಏನು ಹೇಳಿದ್ದರೋ ಅದನ್ನೇ ನಾನೂ ಮಾಡಿದ್ದೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದ್ದಾರೆ.
ಕರುಣಾನಿಧಿ ಅವರ ಸಮಾಧಿಗೆ ಚೆನ್ನೈಯ ಮರಿನಾದಲ್ಲಿ ಜಾಗ ನೀಡಿಲ್ಲ ಎಂಬ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಪೂರ್ವನಿರ್ದೇಶನಗಳಿಗೆ ಅನುಸಾರವಾಗಿ ಕ್ರಮ ಕೈಗೊಂಡಿದ್ದೆ ಎಂದು ಹೇಳಿದ್ದಾರೆ.
‘ಮಾಜಿ ಮುಖ್ಯಮಂತ್ರಿಗಳಾದ ಕೆ.ಕಾಮರಾಜ್ ಮತ್ತು ಜಾನಕಿ ರಾಮಚಂದ್ರನ್ ಅವರ ಸಮಾಧಿಗೆ ಮರಿನಾದಲ್ಲಿ ಜಾಗ ನೀಡಲಾಗದು. ಯಾಕೆಂದರೆ ಅವರು ಮೃತಪಡುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿರಲಿಲ್ಲ ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಹೇಳಿದ್ದರು’ ಎಂದು ಚುನಾವಣಾ ಪ್ರಚಾರ ರ್‍ಯಾಲಿಯೊಂದರಲ್ಲಿ ಪಳನಿಸ್ವಾಮಿ ಹೇಳಿದ್ದಾರೆ.
‘ಕರುಣಾನಿಧಿ ಕೂಡ ಇಹಲೋಕ ತ್ಯಜಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿರಲಿಲ್ಲ. ಅವರು ಅಂದು ಏನು ಹೇಳಿದ್ದರೋ (ಕಾಮರಾಜ್ ಮತ್ತು ಜಾನಕಿ ರಾಮಚಂದ್ರನ್ ಅವರಿಗೆ) ಅದನ್ನೇ ನಾನೂ ಮಾಡಿದ್ದೇನೆ. ಬೇರೇನೂ ಇಲ್ಲ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ನಗರದ ಪ್ರಮುಖ ಪ್ರದೇಶದಲ್ಲಿ ₹180 ಕೋಟಿ ಮೌಲ್ಯದ 46 ಸಾವಿರ ಚದರ ಅಡಿ ಪ್ರದೇಶವನ್ನು ನೀಡುವುದಾಗಿ ನಮ್ಮ ಸರ್ಕಾರ ತಿಳಿಸಿತ್ತು. ಆದರೆ ಅದನ್ನು ಸ್ಟಾಲಿನ್ ಅವರೇ ತಿರಸ್ಕರಿಸಿದ್ದರು ಎಂದೂ ಪಳನಿಸ್ವಾಮಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.