ADVERTISEMENT

ತಮಿಳುನಾಡು: ಮೆಟ್ಟೂರು ಜಲಾಶಯದಿಂದ ನೀರು ಹರಿಸಲು ಸ್ಟಾಲಿನ್‌ ಸೂಚನೆ

ಪಿಟಿಐ
Published 28 ಜುಲೈ 2024, 13:27 IST
Last Updated 28 ಜುಲೈ 2024, 13:27 IST
ಮೆಟ್ಟೂರು ಜಲಾಶಯದಿಂದ ನೀರು ನದಿಗೆ ಬಿಟ್ಟಿರುವುದು– ಪಿಟಿಐ ಸಂಗ್ರಹ ಚಿತ್ರ
ಮೆಟ್ಟೂರು ಜಲಾಶಯದಿಂದ ನೀರು ನದಿಗೆ ಬಿಟ್ಟಿರುವುದು– ಪಿಟಿಐ ಸಂಗ್ರಹ ಚಿತ್ರ   

ಚೆನ್ನೈ: ಕರ್ನಾಟಕದಿಂದ ಭಾರಿ ಪ್ರಮಾಣದ ಒಳಹರಿವು ಹೆಚ್ಚಾಗಿರುವುದರಿಂದ ಸೇಲಂನ ಮೆಟ್ಟೂರು ಅಣೆಕಟ್ಟೆ ಭರ್ತಿಯಾಗುತ್ತಿದೆ. ಹೀಗಾಗಿ, ತಮಿಳುನಾಡು ಸರ್ಕಾರ ಭಾನುವಾರ ಕಾವೇರಿ ಕಣಿವೆ ಜಿಲ್ಲೆಗಳಿಗೆ ಈ ಜಲಾಶಯದಿಂದ ನೀರು ಹರಿಸಲು ಸೂಚಿಸಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ದುರೈಮುರುಗನ್‌ ಹಾಗೂ ಉನ್ನತ ಅಧಿಕಾರಿಗಳು ಪಾಲ್ಗೊಂಡು ಪರಿಸ್ಥಿತಿಯನ್ನು ಅವಲೋಕಿಸಿದರು. 

ಸಭೆಯ ನಂತರ ಮುಖ್ಯಮಂತ್ರಿ ಸ್ಟಾಲಿನ್‌ ಅವರು, ಅಲ್ಪಾವಧಿಯ ಕುರುವೈ ಬೆಳೆಗಳಿಗೆ ನೀರುಣಿಸಲು ಮೆಟ್ಟೂರು ಅಣೆಕಟ್ಟಿನಿಂದ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ADVERTISEMENT

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಕರ್ನಾಟಕವು 1.48 ಲಕ್ಷ ಕ್ಯುಸೆಕ್‌ ಹೆಚ್ಚುವರಿ ನೀರು ಬಿಡುಗಡೆ ಮಾಡಿದೆ. ಮೆಟ್ಟೂರು ಅಣೆಕಟ್ಟೆಯ ಪೂರ್ಣ ಮಟ್ಟ 120 ಅಡಿ ಆಗಿದ್ದು, ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 109.20 ಅಡಿಗಳಿಗೆ ಏರಿಕೆಯಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕರ್ನಾಟಕದಿಂದ ಬಿಡುಗಡೆಯಾಗುತ್ತಿರುವ ನೀರಿನ ಪ್ರಮಾಣ ಮುಂದಿನ ಮೂರು ದಿನಗಳ ಕಾಲ ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ. ಜಲಾಶಯದಿಂದ 12,000 ಕ್ಯುಸೆಕ್‌ ನೀರನ್ನು ಮೊದಲು ತಂಜಾವೂರು ಮತ್ತು ತಿರುಚಿರಾಪಳ್ಳಿ ಸೇರಿ ಕಾವೇರಿ ಕಣಿವೆ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು. ಒಳಹರಿವು ಆಧರಿಸಿ, ಕ್ರಮೇಣ ಹೊರ ಹರಿವು ಹೆಚ್ಚಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.