ADVERTISEMENT

ಜ.30 ರಂದು ಧಾರ್ಮಿಕ ಸಾಮರಸ್ಯ ದಿನವಾಗಿ ಆಚರಿಸಲು ಸ್ಟಾಲಿನ್ ಕರೆ

ಪಿಟಿಐ
Published 29 ಜನವರಿ 2024, 9:56 IST
Last Updated 29 ಜನವರಿ 2024, 9:56 IST
ತಮಿಳು ನಾಡು ಸಿಎಂ, ಎಂ.ಕೆ ಸ್ಟಾಲಿನ್
ತಮಿಳು ನಾಡು ಸಿಎಂ, ಎಂ.ಕೆ ಸ್ಟಾಲಿನ್   

ಚೆನ್ನೈ: ಮಹಾತ್ಮ ಗಾಂಧಿಯವರು ಹುತಾತ್ಮರಾದ ಜ.30 ಅನ್ನು ಧಾರ್ಮಿಕ ಸಾಮರಸ್ಯದ ದಿನವನ್ನಾಗಿ ದೇಶದಾದ್ಯಂತ ಆಚರಿಸಬೇಕು ಎಂದು ಡಿ.ಎಂ.ಕೆ. ಅಧ್ಯಕ್ಷರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಲಪಂಥೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಗಾಂಧೀಜಿ ಮೃತರಾದ 75 ವರ್ಷಗಳ ಬಳಿಕವೂ ಕೋಮುವಾದಿ ಶಕ್ತಿಗಳ ವಿರುದ್ಧದ ಆಕ್ರೋಶ ಇನ್ನೂ ತಣ್ಣಗಾಗಿಲ್ಲ ಎಂದಿದ್ದಾರೆ.

ಮಹಾತ್ಮ ಗಾಂಧಿ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್‌.ಎನ್‌ ರವಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸ್ಟಾಲಿನ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

ಗಾಂಧಿಜಿಯವರ ಪ್ರತಿಷ್ಠೆಗೆ ಧಕ್ಕೆ ತರುವ ಮೂಲಕ ದೇಶದ ಬಹುತ್ವವನ್ನು ಹಾಳುಮಾಡಲು ಬಿಜೆಪಿ ಹೊರಟಿದೆ ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜ.30 ಅನ್ನು ಸ್ವಚ್ಛ ಭಾರತ ಅಭಿಯಾನ ದಿನವನ್ನಾಗಿ ಮಾಡಿದ್ದು ಕೇಂದ್ರ ಸರ್ಕಾರದ ಒಳಸಂಚು. ಅಕ್ಟೋಬರ್‌ 2ರಂದು (ಗಾಂಧಿ ಹುಟ್ಟಿದ ದಿನ) ಜಾಥಾವನ್ನು ಆಯೋಜಿಸುವ ಮೂಲಕ ಜನರ ಗಮನವನ್ನು ಆರ್‌ಎಸ್‌ಎಸ್‌ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿತು. ಆದರೆ ಅದು ನನ್ನ ಸರ್ಕಾರದ ಅವಧಿಯಲ್ಲಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸೌಹಾರ್ದತೆಯನ್ನು ಬೆಳೆಸಲು ನಮ್ಮ ಪಕ್ಷದ ಕಾರ್ಯಕರ್ತರು ಜ.30 ರಂದು ದೇಶದಾದ್ಯಂತ ಕೋಮು ಸೌಹಾರ್ದ ದಿನ ಆಚರಿಸಬೇಕು ಎಂದು ಕರೆ ನೀಡಿದರು.

ಸೌಹಾರ್ದತೆಗೆ ಇಂಬು ಕೊಡುವ ಸಲುವಾಗಿ ಆ ದಿನ, ಪಕ್ಷದ ಜಿಲ್ಲಾ ಘಟಕಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು ಎಂದು ನಿರ್ದೇಶಿಸಿದ್ದಾರೆ.

ರಾಜ್ಯಪಾಲರು ಹೇಳಿದ್ದೇನು?

ಜ.23ರಂದು ನಡೆದ ಸುಭಾಷ್‌ ಚಂದ್ರ ಬೋಸ್‌ ಅವರ 127ನೇ ಹುಟ್ಟು ಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯಪಾಲ ಆರ್.ಎನ್‌ ರವಿ, ಮಹಾತ್ಮ ಗಾಂಧಿಯವರಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ ಎಂದು ಹೇಳಿದ್ದರು. ಬಳಿಕ ಇದಕ್ಕೆ ಸಮಾಜಾಯಿಷಿ ನೀಡಿದ್ದ ಅವರು, ನನ್ನ ಭಾಷಣದ ತುಣುಕನ್ನು ಮಾತ್ರ ತೋರಿಸಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.