ಚೆನ್ನೈ: ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸೋಮವಾರ ಅಂಗೀಕರಿಸಿತು.
ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ನಿರ್ಣಯ ಬೆಂಬಲಿಸಿತು.
ಆದರೆ, ಕಾವೇರಿ ಜಲ ವಿವಾದಕ್ಕೆ ಶಾಶ್ವತವಾದ ಪರಿಹಾರ ಹೊಂದುವ ಉದ್ದೇಶವನ್ನು ನಿರ್ಣಯ ಹೊಂದಿಲ್ಲ ಹಾಗೂ ತಾನು ಸೂಚಿಸಿರುವ ತಿದ್ದುಪಡಿಗಳು ಈ ನಿರ್ಣಯದ ಭಾಗವಾಗಿಲ್ಲ ಎಂದು ಆರೋಪಿಸಿದ ಬಿಜೆಪಿಯು ಸಭಾತ್ಯಾಗ ಮಾಡಿತು.
ನದಿಗಳ ರಾಷ್ಟ್ರೀಕರಣವಾಗಬೇಕು ಹಾಗೂ ಕೇಂದ್ರದ ಅಣೆಕಟ್ಟು ಸುರಕ್ಷತಾ ಮಸೂದೆಗೆ ಬೆಂಬಲ ಸೂಚಿಸುವ ಅಂಶಗಳು ಈ ನಿರ್ಣಯದ ಭಾಗವಾಗಬೇಕು ಎಂದು ಬಿಜೆಪಿಯು ಒತ್ತಾಯಿಸಿತ್ತು.
ನಂತರ ಸ್ಪೀಕರ್ ಎಂ.ಅಪ್ಪಾವು ಅವರು ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಿದರು.
ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಕರ್ನಾಟಕ ‘ಕೃತಕ ಬಿಕ್ಕಟ್ಟು’ ಸೃಷ್ಟಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನೀರು ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು. ಇದಕ್ಕೂ ಮುನ್ನ ಆಡಳಿತ–ವಿರೋಧಪಕ್ಷಗಳ ನಡುವೆ ಬಿಸಿ ಚರ್ಚೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.