ಚೆನ್ನೈ: ತಮಿಳುನಾಡು ಕಾಂಗ್ರೆಸ್ ವಾಕ್ತಾರೆ, ನಟಿ ಖುಷ್ಬೂ ಸುಂದರ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ಅವರು 2014ರಿಂದ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಭಾನುವಾರ ಸಂಜೆಯೇ ಖುಷ್ಬೂ ದೆಹಲಿಗೆ ತೆರಳಿದ್ದು, ಬಿಜೆಪಿ ಸೇರ್ಪಡೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ತಮಿಳುನಾಡಿನಲ್ಲಿ 2021ರ ವಿಧಾನಸಭೆ ಚುನಾವಣೆಗೆ ಕಸರತ್ತು ನಡೆಸುತ್ತಿದ್ದು, ಪಕ್ಷದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸಮ್ಮುಖದಲ್ಲಿ ಖಷ್ಬೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರೊಂದಿಗೆ ತಮಿಳುನಾಡಿನ ಐಆರ್‌ಎಸ್ ಅಧಿಕಾರಿ ಹಾಗೂ ಯುಟ್ಯೂಬರ್ ಸಹ ಬಿಜೆಪಿಗೆ ಸೇರಲಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಶನಿವಾರದಿಂದಲೂ ನವದೆಹಲಿಯಲ್ಲೇ ಇದ್ದಾರೆ.
ವಿಚಾರವಾದಿ ನಾಯಕ ದಿವಂಗತ ಪೆರಿಯಾರ್ ಅವರ ಜೀವನಾಧಾರಿ ಸಿನಿಮಾದಲ್ಲಿ ಪೆರಿಯಾರ್ ಪತ್ನಿ ಮಣಿಯಮ್ಮಾಯ್ ಮಾತ್ರದಲ್ಲಿ ಖುಷ್ಬು ನಟಿಸಿದ್ದರು ಹಾಗೂ ಆ ಸಿನಿಮಾಗೆ ತಮಿಳುನಾಡು ಸರ್ಕಾರ ಹಣ ಹೂಡಿಕೆ ಮಾಡಿತ್ತು. ಅನಂತರ 2010ರಲ್ಲಿ ಖುಷ್ಬೂ ಡಿಎಂಕೆ ಸೇರ್ಪಡೆಯಾಗಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಆದರೆ, 2014ರಲ್ಲಿ ಡಿಎಂಕೆ ತೊರೆದ ಅವರು ಸೋನಿಯಾ ಗಾಂಧಿ ಜೊತೆಗಿನ ಭೇಟಿ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಕಾಂಗ್ರೆಸ್ ಸೇರಿದ್ದ ಸಮಯದಲ್ಲಿ 'ಕಾಂಗ್ರೆಸ್ ಪಕ್ಷ ಮಾತ್ರವೇ ದೇಶದ ಜನರಿಗೆ ಒಳಿತು ಮಾಡಲು ಸಾಧ್ಯ ಹಾಗೂ ದೇಶವನ್ನು ಒಗ್ಗೂಡಿಸಲು ಸಾಧ್ಯ' ಎಂದಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯ ಡಿಎಂಕೆ–ಕಾಂಗ್ರೆಸ್ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್ ನೀಡಲಿಲ್ಲ, ಅಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದ್ದು, ಖುಷ್ಬೂ ಅವರ ತಾರಾ ವರ್ಚಸ್ಸನ್ನು ಬಿಜೆಪಿ ಬಳಸಿಕೊಳ್ಳಬಹುದಾಗಿದೆ. ಆಡಳಿತಾರೂಢ ಎಐಎಡಿಎಂಕೆ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಬಿಜೆಪಿ ಹಲವು ಪ್ರಯತ್ನಗಳಿಗೆ ಮುಂದಾಗಿದೆ.
ಮುಂಬೈನ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಖುಷ್ಬೂ ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡವರು. 90ರ ದಶಕದಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ಸ್ಟಾರ್ ನಟರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಅವರಿಗಾಗಿಯೇ ದೇವಾಲಯವನ್ನೂ ಕಟ್ಟಿದ್ದರು. ಅನಂತರದಲ್ಲಿ ಅವರು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು ಹಾಗೂ ಟಿವಿ ನಿರೂಪಣೆಗಳನ್ನು ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿಯೂ ಖುಷ್ಬೂ ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ನಡೆದಿದ್ದು, #kushboo ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.