ADVERTISEMENT

ತಮಿಳುನಾಡಿನಲ್ಲಿ ₹400 ಕೋಟಿ ಆಸ್ತಿ ಮುಟ್ಟುಗೋಲು: ಜಾರಿ ನಿರ್ದೇಶನಾಲಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 12:42 IST
Last Updated 3 ಜುಲೈ 2022, 12:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ(ಪಿಟಿಐ):ತಮಿಳುನಾಡಿನಲ್ಲಿ ಬ್ಯಾಂಕ್‌ ಮತ್ತು ಲಾಟರಿ ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆಯ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹400 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಕೇಂದ್ರೀಯ ತನಿಖಾ ಸಂಸ್ಥೆ ಇ.ಡಿ (ಜಾರಿ ನಿರ್ದೇಶನಾಲಯ) ಮಟ್ಟುಗೋಲು ಹಾಕಿಕೊಂಡಿದೆ.

ಇಂಡಿಯನ್‌ ಬ್ಯಾಂಕಿಗೆ ವಂಚಿಸಿರುವ ಚೆನ್ನೈನ ಸರವಣ ಸ್ಟೋರ್ಸ್‌ಗೆ (ಗೋಲ್ಡ್‌ ಪ್ಯಾಲೇಸ್‌) ಸೇರಿದ ಸುಮಾರು ₹234.75 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ಸರವಣ ಸ್ಟೋರ್ಸ್‌ (ಗೋಲ್ಡ್‌ ಪ್ಯಾಲೇಸ್‌) ಪಾಲುದಾರರಾದ ದಿವಂಗತ ಪಲ್ಲಕುದುರೈ, ಪಿ.ಸುಜಾತಾ ಮತ್ತು ವೈ.ಪಿ.ಶಿರವನ್‌, ಅಪರಿಚಿತ ಅಧಿಕಾರಿಗಳು ಮತ್ತು ಇನ್ನಿತರರುಚೆನ್ನೈನ ಟಿ.ನಗರದ ಇಂಡಿಯನ್‌ ಬ್ಯಾಂಕ್‌ ಶಾಖೆಗೆವಂಚಿಸಿರುವ ಬಗ್ಗೆ ಸಿಬಿಐ ಮೊದಲು ಪ್ರಕರಣ ದಾಖಲಿಸಿಕೊಂಡಿತ್ತು.

ADVERTISEMENT

ನಂತರ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಇ.ಡಿ, ಸರವಣ ಸ್ಟೋರ್ಸ್‌ ಪಾಲುದಾರರು ತಮ್ಮ ಉದ್ಯಮ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಬಿಂಬಿಸಿ, ವಾರ್ಷಿಕವಹಿವಾಟಿನಉತ್ಪ್ರೇಕ್ಷಿತ ಚಿತ್ರಣ ನೀಡಿ ಬ್ಯಾಂಕಿನಿಂದ ಹೆಚ್ಚಿನ ಸಾಲ ಪಡೆದಿದ್ದರು. ಆದರೆ, ಮಾರಾಟ ವರದಿ ಮತ್ತು ಜಮಾ ನಮೂದಿನಲ್ಲಿ ಭಾರಿ ವ್ಯತ್ಯಾಸಗಳು ಇರುವುದು, ಉದ್ಯಮ ಪಾಲುದಾರರು ವೈಯಕ್ತಿಕ ಲಾಭಕ್ಕಾಗಿ ವೇಲೂರಿನಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ಆಸ್ತಿ ಖರೀದಿಸಿ, ಬ್ಯಾಂಕಿಗೆ ಉದ್ದೇಶಪೂರ್ವಕ ನಷ್ಟ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ.

ಮತ್ತೊಂದು ಪ್ರಕರಣದಲ್ಲಿ ತಮಿಳುನಾಡಿನ ‘ಲಾಟರಿ ಕಿಂಗ್‌’ ಸ್ಯಾಂಟಿಯಾಗೊ ಮಾರ್ಟಿನ್‌ ಅವರಿಗೆ ಸೇರಿದ ಸುಮಾರು ₹173.48 ಕೋಟಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿಮಾರ್ಟಿನ್‌ ಅವರ ಹೆಸರಿನಲ್ಲಿರುವ ಹಲವು ಕಂಪನಿಗಳ ಆಸ್ತಿ ಮತ್ತು ಬ್ಯಾಂಕ್‌ ಖಾತೆಗಳು, ಚರ ಹಾಗೂ ಸ್ಥಿರ ಆಸ್ತಿಗಳು ಸೇರಿವೆ.

ಎಂ.ಜೆ. ಅಸೋಸಿಯೇಟ್ಸ್ ಪಾಲುದಾರರಾದ ಸ್ಯಾಂಟಿಯಾಗೊ ಮತ್ತು ಎನ್‌.ಜಯಮುರುಗನ್‌ ಅವರು 2009ರಿಂದ 2010ರ ಅವಧಿಯಲ್ಲಿ ಲಾಟರಿ ವಿಜೇತರ ಬಹುಮಾನ ಮೊತ್ತವನ್ನು ಅನಧಿಕೃತವಾಗಿ ಹೆಚ್ಚಿಸಿ,ಅಸ್ಸಾಂ ಸರ್ಕಾರಕ್ಕೆ ಸುಮಾರು ₹910.29 ಕೋಟಿ ನಷ್ಟ ಮಾಡಿದ್ದರು. ಅಕ್ರಮವಾಗಿ ಲಾಭ ಗಳಿಸಿದ ಸಂಬಂಧ ಎಂ.ಜೆ. ಅಸೋಸಿಯೇಟ್ಸ್ ವಿರುದ್ಧ ಸಿಬಿಐ ಮೊದಲು ಪ್ರಕರಣ ದಾಖಲಿಸಿತ್ತು. ಮಾರ್ಟಿನ್‌ ಮತ್ತು ಇತರರ ವಿರುದ್ಧ ಈ ಹಿಂದೆ ₹278 ಕೋಟಿ ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿತ್ತು ಎಂದುಇ.ಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.