ಮದುರೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಂ.ಜಿ.ರಾಮಚಂದ್ರನ್ (ಎಂಜಿಆರ್) ಮತ್ತು ದಿವಂಗತ ಜಯಲಲಿತಾ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ದೇವಾಲಯದೊಳಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಮುಖಂಡರ ಚಿತ್ರಗಳನ್ನು ಹಾಕಲಾಗಿದೆ.
ತಮಿಳುನಾಡು ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಾಗಿ ಬಿಜೆಪಿಯು ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
'ಜಯಲಲಿತಾ ಅವರ ಧೈರ್ಯ ಮತ್ತು ಅವರು ಮಾಡಿದ ತ್ಯಾಗವನ್ನು ಜಗತ್ತಿಗೆ ತೋರುವ ಸಲುವಾಗಿ, ಅವರ ಸ್ಮರಣಾರ್ಥವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ' ಎಂದು ಕಂದಾಯ ಸಚಿವ ಆರ್.ಬಿ. ಉದಯ ಕುಮಾರ್ ಹೇಳಿರುವುದಾಗಿ ಎಎನ್‌ಐ ಟ್ವೀಟಿಸಿದೆ.
'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ದೇಶಕ್ಕೆ ನೀಡಿದೆ. ಜೆ.ಪಿ.ನಡ್ಡಾ ಅವರು ಆರೋಗ್ಯ ಸಚಿವರಾಗಿದ್ದಾಗ ಮದುರೈನಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣವಾಯಿತು. ಇನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಮದುರೈ ನವರು. ಈ ಕಾರಣಗಳಿಂದಾಗಿ ಅವರ ಫೋಟೊಗಳನ್ನು ಎಂಜಿಆರ್ ಮತ್ತು ಜಯಲಲಿತಾ ಅವರ ಸ್ಮರಣಾರ್ಥ ನಿರ್ಮಿಸಲಾಗಿರುವ ದೇವಾಲಯದಲ್ಲಿ ಹಾಕಲಾಗಿದೆ' ಎಂದು ಬಿಜೆಪಿ ಮುಖಂಡರ ಚಿತ್ರಗಳ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.
ಎಂಜಿಆರ್ 1987ರ ಡಿಸೆಂಬರ್ 24ರಂದು, ಜಯಲಲಿತಾ 2016ರ ಡಿಸೆಂಬರ್ 5ರಂದು ನಿಧನರಾದರು. ತಿರುಮಂಗಳಂ ಸಮೀಪ 12 ಎಕರೆ ಪ್ರದೇಶದಲ್ಲಿ ದೇವಾಲಯ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.