ಚೆನ್ನೈ: ಸಾಗರ ಜೀವಿಗಳು ವಂಶಾಭಿವೃದ್ಧಿಗಾಗಿ ಗೂಡು ಕಟ್ಟಿಕೊಳ್ಳುವ ಋತು ಮುಕ್ತಾಯ ಸಮೀಪಿಸುತ್ತಿದ್ದಂತೆ ದಾಖಲೆ ಸಂಖ್ಯೆಯ ಸಮುದ್ರ ಆಮೆ ಮರಿಗಳನ್ನು ತಮಿಳುನಾಡಿನಲ್ಲಿ ಬಂಗಾಳ ಕೊಲ್ಲಿಗೆ ಬಿಡಲಾಗಿದೆ.
1,076 ಕಿ.ಮೀ. ಉದ್ದದ ಕರಾವಳಿ ತೀರವನ್ನು ತಮಿಳುನಾಡು ಹೊಂದಿದೆ. ಆಲಿವ್ ರಿಡ್ಲೆ, ಹಸಿರು ಆಮೆ, ಹಾಕ್ಸ್‌ಬಿಲ್, ಲಾಗರ್‌ಹೆಡ್ ಮತ್ತು ಲೀದರ್‌ಬ್ಯಾಕ್ ಸೇರಿದಂತೆ ವಿವಿಧ ಜಾತಿಯ ಆಮೆಗಳು ತೀರ ಪ್ರದೇಶಕ್ಕೆ ನಿಯಮಿತವಾಗಿ ಬಂದುಹೋಗುತ್ತವೆ. ಈ ಪೈಕಿ ಆಲಿವ್ ರಿಡ್ಲೆ ಆಮೆಗಳು ಹೆಚ್ಚಾಗಿ ಬರುತ್ತವೆ.
'ಆಮೆಗಳು ಮೊಟ್ಟೆ ಇಡಲು ತಾತ್ಕಾಲಿಕ ಕೇಂದ್ರಗಳನ್ನು ರಚಿಸುವುದು, ಸಾಗರ ಜೀವಿಗಳ ರಕ್ಷಣೆ ಕುರಿತು ಸಿಬ್ಬಂದಿಗೆ ತರಬೇತಿ, ರಾತ್ರಿ ಗಸ್ತು ಕಾರ್ಯಾಚರಣೆ ಸಂಬಂಧ ಇಲಾಖೆಯ ಆಂತರಿಕ ಸಭೆಗಳನ್ನು ನಡೆಸುವುದೂ ಸೇರಿದಂತೆ ಹಲವು ಆಮೆಗಳ ಸಂರಕ್ಷಣೆ ಕಾರ್ಯಕ್ರಮಗಳಿಗಾಗಿ ಪ್ರತಿವರ್ಷ ನವೆಂಬರ್‌ನಲ್ಲಿ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತದೆ' ಎಂದು ಪರಿಸರ ಮತ್ತು ಹವಾಮಾನ ಬದಲಾವಣೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದಾರೆ.
ಇಲಾಖೆ ವತಿಯಿಂದ ಆಮೆಗಳ ಸಂರಕ್ಷಣೆ ಕಾರ್ಯಕ್ರಮದ ಭಾಗವಾಗಿ ಈ ವರ್ಷ 185 ಸಿಬ್ಬಂದಿ ಹಾಗೂ 264 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಸದ್ಯದ ಗೂಡು ಕಟ್ಟುವ ಋತುವಿನಲ್ಲಿ, ಆಮೆಗಳು ಮೊಟ್ಟೆ ಇಡಲು 13 ಜಿಲ್ಲೆಗಳಲ್ಲಿ 53 ಕೇಂದ್ರಗಳನ್ನು ತೆರೆಯಲಾಗಿದೆ.
ಸುಮಾರು 2,363 ಗೂಡುಗಳಿಂದ ಒಟ್ಟು 2,58,775 ಮೊಟ್ಟೆಗಳನ್ನು ಸಂಗ್ರಹಿಸಲಾಗಿದ್ದು, ಇವುಗಳನ್ನು ಇಲಾಖೆ ತೆರೆದಿರುವ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ.
ಈ ವರ್ಷ ಇಂದಿನವರೆಗೆ ಒಟ್ಟು 2,15,778 ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ. ಕಡಲಾಮೆಗಳ ಸಂರಕ್ಷಣೆ ಭಾಗವಾಗಿ, ಕುದ್ದಲೋರ್, ನಾಗಪಟ್ಟಿಣಂ ಮತ್ತು ಚೆನ್ನೈನಲ್ಲಿ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳನ್ನು ಬಿಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,82,917 ಮರಿಗಳನ್ನು ಸಾಗರಕ್ಕೆ ಸೇರಿಸಲಾಗಿತ್ತು.
ಸಾಗರ ಜೀವಿಗಳ ಸಂರಕ್ಷಣೆ ಪ್ರಯತ್ನದ ಭಾಗವಾಗಿ, ಚೆನ್ನೈ ಮತ್ತು ನಾಗಪಟ್ಟಿಣಂ ಜಿಲ್ಲೆಗಳಲ್ಲಿ ಸಮುದ್ರ ಆಮೆಗಳ ಸಂರಕ್ಷಣಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.