ಚೆನ್ನೈ: ಎರಡು ದಿನಗಳಿಂದ ಆಮ್ಲಜನಕ ಉತ್ಪಾದನೆ ಆರಂಭಿಸಿರುವ ತೂತುಕುಡಿಯ ಸ್ಟೆರಲೈಟ್ ತಾಮ್ರ ಘಟಕದಲ್ಲಿ ತಾಂತ್ರಿಕ ಅಡಚಣೆ ಕಂಡುಬಂದಿದ್ದು, ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಂತ್ರಜ್ಞರು ತಾಂತ್ರಿಕ ಸಮಸ್ಯೆ ಬಗೆಹರಿಸುವ ಕೆಲಸದಲ್ಲಿದ್ದಾರೆ. ಶೀಘ್ರ ಆಮ್ಲಜನಕ ಉತ್ಪಾದನೆ ಪುನರಾರಂಭಗೊಳ್ಳಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಗುರುವಾರ ತಲಾ 4.8 ಟನ್ ಆಮ್ಲಜನಕ ಹೊತ್ತ ಎರಡು ಟ್ಯಾಂಕರ್‌ಗಳು ಈ ಘಟಕದಿಂದ ಹೊರಬಂದಿದ್ದವು. ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಭರವಸೆಯನ್ನು ಕಂಪನಿ ನೀಡಿತ್ತು.
2018ರಲ್ಲಿ ಕಂಪನಿಯು ಪರಿಸರ ಮಾಲಿನ್ಯ ಉಂಟುಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು. ಆಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 13 ಮಂದಿ ಮೃತಪಟ್ಟಿದ್ದರು. ಬಳಿಕ ತಮಿಳುನಾಡು ಸರ್ಕಾರ ಕಂಪನಿಯನ್ನು ಮುಚ್ಚಿಸಿತ್ತು. ಈಚೆಗೆ ಆಮ್ಲಜನಕಕ್ಕೆ ತೀವ್ರ ಕೊರತೆ ಉಂಟಾದ್ದರಿಂದ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಾಲ್ಕು ತಿಂಗಳ ಅವಧಿಗೆ ಕಂಪನಿಯನ್ನು ಪುನರಾರಂಭಿಸಿ, ಆಮ್ಲಜನಕ ಉತ್ಪಾದನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.