ADVERTISEMENT

ಆಮ್ಲಜನಕ ಉತ್ಪಾದನೆಗೆ ‘ಸ್ಟೆರ್‌ಲೈಟ್‌’ಗೆ ಅವಕಾಶ

ತಮಿಳುನಾಡಿನ ಸರ್ವಪಕ್ಷಗಳ ಸಭೆಯಲ್ಲಿ ನಿರ್ಧಾರ

ಪಿಟಿಐ
Published 26 ಏಪ್ರಿಲ್ 2021, 13:44 IST
Last Updated 26 ಏಪ್ರಿಲ್ 2021, 13:44 IST
ಕೆ. ಪಳನಿಸ್ವಾಮಿ
ಕೆ. ಪಳನಿಸ್ವಾಮಿ   

ಚೆನ್ನೈ: ತೂತ್ತುಕುಡಿಯಲ್ಲಿನ ವೇದಾಂತ ಕಂಪನಿಯ ಸ್ಟೆರ್‌ಲೈಟ್ ಕಾರ್ಖಾನೆಗೆ ನಾಲ್ಕು ತಿಂಗಳುಗಳ ಕಾಲ ಆಮ್ಲಜನಕ ಉತ್ಪಾದಿಸಲು ಅವಕಾಶ ನೀಡಲಾಗಿದೆ.

ತಮಿಳುನಾಡು ಸರ್ಕಾರ ಸೋಮವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿಎಂಕೆ ಸೇರಿದಂತೆ ಇತರ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.

ಆಮ್ಲಜನಕ ಘಟಕದ ಆರಂಭಕ್ಕೆ ಅನುಮತಿ ನೀಡುವಂತೆ ಕೋರಿ ವೇದಾಂತ ಕಂಪನಿಯೂ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ‘ಆಮ್ಲಜನಕ ಕೊರತೆಯಿಂದ ಜನರು ಸಾವಿಗೀಡಾಗುತ್ತಿದ್ದಾರೆ. ಆಮ್ಲಜನಕ ಉತ್ಪಾದಿಸಲು ಸ್ಟೆರ್‌ಲೈಟ್ ತಾಮ್ರ ಸಂಸ್ಕರಣ ಘಟಕವನ್ನು ತಮಿಳುನಾಡು ಸರ್ಕಾರ ಏಕೆ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾವು ಯಾವುದೇ ಕಂಪನಿಯ ಬಗ್ಗೆ ಆಸಕ್ತಿ ಹೊಂದಿಲ್ಲ. ಆಮ್ಲಜನಕ ಉತ್ಪಾದನೆಯಾಗುವುದು ಮುಖ್ಯ’ ಎಂದು ಹೇಳಿತ್ತು.

ADVERTISEMENT

‘ಸುಪ್ರೀಂ ಕೋರ್ಟ್‌ ನಿರ್ದೇಶನ ಮೇರೆಗೆ ಆಮ್ಲಜನಕ ಉತ್ಪಾದಿಸಲು ವಿದ್ಯುತ್‌ ಪೂರೈಕೆ ಸೇರಿದಂತೆ ಅಗತ್ಯ ಇರುವ ನೆರವು ಒದಗಿಸಲಾಗುವುದು. ನಾಲ್ಕು ತಿಂಗಳು ಮಾತ್ರ ಆಮ್ಲಜನಕ ಉತ್ಪಾದನೆಗೆ ಅವಕಾಶ ದೊರೆಯಲಿದೆ. ಪರಿಸ್ಥಿತಿಯ ಆಧಾರದ ಮೇಲೆ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ. ಆದರೆ, ತಾಮ್ರ ಉತ್ಪಾದನೆ, ಕೋ–ಜನರೇಷನ್‌ ಘಟಕ ಆರಂಭಿಸುವುದು ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ. ನಾಲ್ಕು ತಿಂಗಳ ಬಳಿಕ ವಿದ್ಯುತ್‌ ಪೂರೈಕೆಯನ್ನು ಕಡಿತಗೊಳಿಸಲಾಗುವುದು’ ಎಂದು ಸರ್ವಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ವೇದಾಂತ, ‘ಪ್ರತಿ ದಿನ ಒಂದು ಸಾವಿರ ಟನ್‌ಗಳಷ್ಟು ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಾಗಿದೆ. ಆದ್ಯತೆಯ ಮೇರೆಗೆ ಅಗತ್ಯವಿರುವ ಸ್ಥಳಗಳಿಗೆ ಆಮ್ಲಜನಕ ಪೂರೈಸಲಾಗುವುದು’ ಎಂದು ತಿಳಿಸಿದೆ.

ತೂತ್ತುಕುಡಿಯಲ್ಲಿನ ಸ್ಟೆರ್‌ಲೈಟ್ ತಾಮ್ರ ಸಂಸ್ಕರಣ ಘಟಕವನ್ನು ರಾಜ್ಯ ಸರ್ಕಾರ 2018ರ ಮೇ ತಿಂಗಳಲ್ಲಿ ಮುಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.