ADVERTISEMENT

ತಮಿಳುನಾಡಿನಲ್ಲಿ ರೈಲು ಅಪಘಾತ: ವಿಧ್ವಂಸಕ ಕೃತ್ಯಕ್ಕೆ ಸಂಚು; ಪರಿಶೀಲನಾ ತಂಡ ಶಂಕೆ

ಪಿಟಿಐ
Published 13 ಅಕ್ಟೋಬರ್ 2024, 15:45 IST
Last Updated 13 ಅಕ್ಟೋಬರ್ 2024, 15:45 IST
.
.   

ನವದೆಹಲಿ: ತಮಿಳುನಾಡಿನ ಕವರೈಪೆಟ್ಟೈ ಸಮೀಪ ಸಂಭವಿಸಿದ ರೈಲು ಅವಘಡಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ರೈಲ್ವೆಯ ಹಿರಿಯ ಅಧಿಕಾರಿಗಳ ತಂಡವು ‘ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಪರಿಶೀಲನಾ ತಂಡದಲ್ಲಿ ಸಿಗ್ನಲ್ ಮತ್ತು ಟೆಲಿಕಾಂ, ಎಂಜಿನಿಯರಿಂಗ್‌ ಮತ್ತು ಆಪರೇಷನ್‌ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳು ಇದ್ದರು.

‘ಇಂಟರ್‌ಲಾಕ್ ವ್ಯವಸ್ಥೆಯ ಮೆಕಾನಿಕಲ್‌ ಭಾಗಗಳನ್ನು ತೆಗೆದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಬಗ್ಗೆ ತರಬೇತಿ ಇರುವ ವ್ಯಕ್ತಿಗಳಿಂದ ಮಾಹಿತಿ ಪಡೆದು ಈ ಕೃತ್ಯ ನಡೆಸಿದಂತೆ ಕಾಣುತ್ತಿದೆ. ಈ ಹಿಂದೆಯೂ ಇದೇ ರೀತಿ ಮಾಡಲು ಯತ್ನಿಸಿರುವಂತಿದೆ ಎಂದು ತಿಳಿಸಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಕವರೈಪೆಟ್ಟೈ ರೈಲು ನಿಲ್ದಾಣದ ಸಮೀಪ ಇಂಟರ್‌ಲಾಕಿಂಗ್‌ ಸುರಕ್ಷತಾ ವ್ಯವಸ್ಥೆಯನ್ನು ಹಾಳು ಮಾಡಲು ಈ ಹಿಂದೆ ಯತ್ನಿಸಿರುವ ಬಗ್ಗೆ ವರದಿಯಾಗಿತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲನೆ ನಡೆಸಿದ ನಂತರ ಸಿಗ್ನಲ್‌ ದೋಷ ಅಥವಾ ಬೇರಾವುದೇ ದೋಷ ಆಗಿರಲಿಲ್ಲ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ 11ರಂದು ಮೈಸೂರು– ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು  ತಮಿಳುನಾಡಿನ ಕವರೈಪೆಟ್ಟೈ ಸಮೀಪ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಬೋಗಿಗಳು ಹಳಿತಪ್ಪಿದ್ದವು. ಇದರಿಂದ 19 ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.