ತೂತ್ತುಕುಡಿ: ತಮಿಳುನಾಡಿನ ತೂತ್ತುಕುಡಿಯ ತಂದೆ–ಮಗ (ಪಿ ಜಯರಾಜ್ ಮತ್ತು ಬೆನಿಕ್ಸ್) ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟ ಘಟನೆಗೆಸಂಬಂಧಿಸಿದಂತೆ ಅಪರಾಧ ವಿಭಾಗದ ಸಿಐಡಿ ಅಧಿಕಾರಿಗಳು ಬುಧವಾರ ಸತ್ತಾನ್‌ಕುಲಂ ಪೊಲೀಸ್ ಠಾಣೆಯ ಎಸ್‌ಐ ರಘು ಗಣೇಶ್ ಸೇರಿದಂತೆ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಇಷ್ಟೇ ಅಲ್ಲದೆ, ಬುಧವಾರ ರಾತ್ರಿ ಹೊತ್ತಿಗೆ ಎಸ್‌ಐ ರಘು ಗಣೇಶ್, ಇಬ್ಬರು ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು ನಾಲ್ವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಬಾಲಕೃಷ್ಣನ್, ಕಾನ್‌ಸ್ಟೇಬಲ್‌ಗಳಾದ ಮುತ್ತುರಾಜ್ ಮತ್ತು ಮುರುಗನ್ ಬಂಧನಕ್ಕೊಳಗಾದ ಇತರರು.
ಎಸ್‌ಐ ರಘು ಗಣೇಶ್‌ರನ್ನು ಬಂಧಿಸಿಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸತ್ತಾನ್‌ಕುಲಂನ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ಪಠಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಸತ್ತಾನ್‌ಕುಲಂ ಠಾಣೆಯ ಪೊಲೀಸರ ತೀವ್ರ ಹಲ್ಲೆಯಿಂದಲೇ ಜಯರಾಜ್ ಮತ್ತು ಬೆನಿಕ್ಸ್ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಮತ್ತು ಸತ್ತಾನ್‌ಕುಲಂ ನಾಗರಿಕರು ಆರೋಪಿಸಿದ್ದರು ಮತ್ತು ಪ್ರತಿಭಟನೆಗಳನ್ನೂ ನಡೆಸಿದ್ದರು. ಸತ್ತಾನ್‌ಕುಲಂ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕಾಗಿ ಆಗ್ರಹಿಸಿದ್ದರು. ಅದರಂತೆ ಪ್ರಕರಣದಲ್ಲಿ ಎಸ್‌ಐ ರಘು ಸೇರಿದಂತೆ 6 ಮಂದಿ ವಿರುದ್ಧ ಸಿಐಡಿ ಅಧಿಕಾರಿಗಳು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಇದು ಸತ್ತಾನ್‌ಕುಲಂ ನಾಗರಿಕರ ಹರ್ಷಕ್ಕೆ ಕಾರಣವಾಗಿದೆ.
ಲಾಕ್‌ಡೌನ್ ಜಾರಿ ಇದ್ದಾಗ್ಯೂ ಅಂಗಡಿ ತೆರೆದಿದ್ದ ಕಾರಣಕ್ಕೆ ಜೂನ್ 19ರಂದು ಜಯರಾಜ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರು.
ಮೊಬೈಲ್ ಫೋನ್‌ಗಳ ಮಾರಾಟ ಮಳಿಗೆ ಹೊಂದಿರುವ ಮಗ ಬೆನಿಕ್ಸ್ ಠಾಣೆಗೆ ತೆರಳಿ, ತಂದೆಯ ಬಿಡುಗಡೆಗೆ ಮನವಿ ಮಾಡಿದ್ದರು.
ಅವರನ್ನೂ ಬಂಧಿಸಿದ್ದ ಪೊಲೀಸರು, ಇಬ್ಬರಿಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು ಎನ್ನಲಾಗಿದೆ. ಬಂಧಿತರಿಗೆ ಜಾಮೀನು ದೊರಕಬಾರದು ಎಂಬ ಉದ್ದೇಶದಿಂದ ಅವರ ವಿರುದ್ಧ ಹಣಕ್ಕಾಗಿ ಬೆದರಿಕೆ ಒಡ್ಡಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಿರುವುದು ಬಹಿರಂಗಗೊಂಡಿದೆ. ಈ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೋವಿಲಪಟ್ಟಿ ಉಪ ಕಾರಾಗೃಹದಲ್ಲಿ ಇದ್ದಾಗಲೇ ತೀವ್ರವಾಗಿ ಅಸ್ವಸ್ಥಗೊಂಡ ತಂದೆ, ಮಗ ಜೂನ್ 23ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಈ ಪ್ರಕರಣ ತಮಿಳುನಾಡಿನಲ್ಲಿ ಕೋಲಾಹಲವೆಬ್ಬಿಸಿತ್ತು. ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದು ಟೀಕಿಸಿದ್ದವು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.