ADVERTISEMENT

ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ಪಿಟಿಐ
Published 20 ಅಕ್ಟೋಬರ್ 2022, 2:49 IST
Last Updated 20 ಅಕ್ಟೋಬರ್ 2022, 2:49 IST
ಶಶಿಕಲಾ
ಶಶಿಕಲಾ   

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು 2016ರಲ್ಲಿ ಸಾಯುವುದಕ್ಕೆ ಕಾರಣವಾಗಿದ್ದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಆಯೋಗವು ವಿ.ಕೆ. ಶಶಿಕಲಾ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿದೆ. ಶಶಿಕಲಾ ಅವರು ಜಯಲಲಿತಾ ಅವರಿಗೆ ಅತ್ಯಂತ ಆಪ್ತವಾಗಿದ್ದರು. ವರದಿಯ ಕುರಿತು ಕಾನೂನು ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರವು ಮಂಗಳವಾರ ತಿಳಿಸಿದೆ.

ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಶಶಿಕಲಾ ಅವರಲ್ಲದೆ ಇತರ ಹಲವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸಮಿತಿಯು ಸಲಹೆ ಕೊಟ್ಟಿದೆ. ಜಯಲಲಿತಾ ಸಾಯುವ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಸಿ.ವಿಜಯಭಾಸ್ಕರ್‌, ವೈದ್ಯ ಕೆ.ಎಸ್‌. ಶಿವಕಮಾರ್‌ (ಇವರು ಶಶಿಕಲಾ ಅವರ ಸಂಬಂಧಿ), ಆರೋಗ್ಯ ಕಾರ್ಯದರ್ಶಿಯಾಗಿದ್ದ ಜೆ.ರಾಧಾಕೃಷ್ಣನ್‌ ಮತ್ತು ಮುಖ್ಯ ಕಾರ್ಯದರ್ಶಿಯಾಗಿದ್ದ ರಾಮ ಮೋಹನ ರಾವ್‌ ಅವರ ಪಾತ್ರದ ಕುರಿತೂ ತನಿಖೆ ಆಗಬೇಕು ಎಂದು ವರದಿಯು ಹೇಳಿದೆ.

ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ನೇತೃತ್ವದ ಏಕ ಸದಸ್ಯ ಆಯೋಗವು ಈ ವರದಿಯನ್ನು ಸಿದ್ಧಪಡಿಸಿದೆ.

ADVERTISEMENT

ಏಮ್ಸ್‌ ವೈದ್ಯರ ಸಮಿತಿಯು ಕೊಟ್ಟ ವರದಿಯ ಹಲವು ವಿಚಾರಗಳ ಬಗ್ಗೆ ನ್ಯಾಯಾಂಗ ಆಯೋಗವು ಅಸಮ್ಮತಿ ಸೂಚಿಸಿದೆ. ಶಶಿಕಲಾ ಅವರ ಪಾತ್ರವಿರುವ ವಿವಿಧ ವಿಚಾರಗಳ ಕುರಿತಂತೆ ತನಿಖೆ ನಡೆಸಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ತಮಿಳುನಾಡು ಸರ್ಕಾರವು ತಿಳಿಸಿದೆ. ಇಬ್ಬರು ವೈದ್ಯರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಸಮಿತಿ ಹೇಳಿದೆ. ಆದರೆ, ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದ ಚೆನ್ನೈನ ಆಸ್ಪತ್ರೆಯ ಅಧ್ಯಕ್ಷರನ್ನು ತನಿಖೆಗೆ ಒಳಪಡಿಸಬೇಕೇ, ಬೇಡವೇ ಎಂಬುದನ್ನು ಸರ್ಕಾರವೇ ನಿರ್ಧರಿಸಬಹುದು ಎಂದು ಆಯೋಗವು ಹೇಳಿದೆ.

ಜಯಲಲಿತಾ ಅವರನ್ನು 2016ರ ಸೆಪ್ಟೆಂಬರ್‌ 22ರಂದು ಆಸ್ಪತ್ರೆಗೆ ದಾಖಲಿಸಲು ಕಾರಣವಾದ ಸನ್ನಿವೇಶ ಮತ್ತು ಆಸ್ಪತ್ರೆಯಲ್ಲಿ ಅವರಿಗೆ ನೀಡಲಾದ ಚಿಕಿತ್ಸೆಯ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡಲು ನ್ಯಾಯಾಂಗ ಆಯೋಗಕ್ಕೆ ಸೂಚಿಸಲಾಗಿತ್ತು. ಆಸ್ಪತ್ರೆಗೆ ಸೇರಿಸಿದ ವಿಚಾರದಲ್ಲಿ ಶಶಿಕಲಾ ಮತ್ತು ಇತರರ ವರ್ತನೆಯಲ್ಲಿ ಅಸಾಧಾರಣ ಅಥವಾ ಅಸಹಜವಾದುದು ಏನೂ ಕಂಡಿಲ್ಲ ಎಂದು ವರದಿಯು ವಿವರಿಸಿದೆ.

ಜಯಲಲಿತಾ ಅವರನ್ನು ಅಪೊಲೊ ಆಸ್ಪತ್ರೆಗೆ ಸೇರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ವಿಳಂಬ ಆಗಿಲ್ಲ ಎಂದು ವರದಿ ಹೇಳಿದೆ.ಆದರೆ, ಚಿಕಿತ್ಸೆಗೆ ಸಂಬಂಧಿಸಿದ ವಿಚಾರಗಳಲ್ಲಿ ಶಶಿಕಲಾ ಮತ್ತು ಇತರರನ್ನು ತನಿಖೆಗೆ ಒಳಪಡಿಸಬೇಕು ಎಂದಿದೆ.

ಅಮೆರಿಕದ ಹೃದಯ ತಜ್ಞ ಡಾ. ಸಮಿನ್‌ ಶರ್ಮಾ ಅವರು ಜಯಲಲಿತಾ ಅವರನ್ನು ಪರಿಶೀಲಿಸಿ ಹೃದಯ ಶಸ್ತ್ರಕ್ರಿಯೆ ನಡೆಸಬೇಕು ಎಂದು ಸಲಹೆ ಕೊಟ್ಟಿದ್ದರು. ಆಗ ಪ್ರಜ್ಞೆ ಹೊಂದಿದ್ದ ಜಯಲಲಿತಾ ಅವರು ಶಸ್ತ್ರಕ್ರಿಯೆಗೆ ಸಮ್ಮತಿಯನ್ನೂ ಕೊಟ್ಟಿದ್ದರು. ಆದರೆ, ಬ್ರಿಟನ್‌ನ ವೈದ್ಯರೊಬ್ಬರು (ಫಿಜಿಷಿಯನ್‌) ಶಸ್ತ್ರಕ್ರಿಯೆ ಬೇಡ ಎಂದ ಕಾರಣಕ್ಕೆ ಶಸ್ತ್ರಕ್ರಿಯೆ ನಡೆಸುವ ಯೋಚನೆಯನ್ನು ಕೈಬಿಡಲಾಯಿತು. ಶಸ್ತ್ರಕ್ರಿಯೆ ನಡೆಸುವುದರಿಂದ ಪ್ರಯೋಜನ ಇದೆ ಎಂದು ಹೃದಯ ತಜ್ಞರೇ ವಿಶ್ವಾಸ ವ್ಯಕ್ತಪಡಿಸಿದ್ದರು. ಹಾಗಿದ್ದರೂ ಫಿಜಿಷಿಯನ್ ಒಬ್ಬರನ್ನು ಕರೆತಂದು ಅವರ ಅಭಿಪ್ರಾಯ ಪಡೆಯುವ ಅಗತ್ಯ ಏನಿತ್ತು ಎಂದು ವರದಿಯಲ್ಲಿ ಪ್ರಶ್ನಿಸಲಾಗಿದೆ. ಆ್ಯಂಜಿಯೊಗ್ರಫಿ ನಡೆಸುವುದನ್ನು ತಪ್ಪಿಸುವುದಕ್ಕಾಗಿಯೇ ಆಸ್ಪತ್ರೆಯ ವೈದ್ಯ ಒಬ್ಬರು ‘ಕುತಂತ್ರ’ ಮಾಡಿದ್ದಾರೆ. ಯಾರನ್ನೋ ಮೆಚ್ಚಿಸುವುದಕ್ಕಾಗಿ ಇದನ್ನು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರ ಜತೆಗೆ (ವಿಶೇಷವಾಗಿ ಅಪೊಲೊ ಆಸ್ಪತ್ರೆಯ ವೈದ್ಯರು) ಶಶಿಕಲಾ ಅವರು ಮಾತ್ರ ಮಾತನಾಡುತ್ತಿದ್ದರು. ಶಶಿಕಲಾ ಅವರ ಸಮ್ಮತಿ ಪಡೆದೇ ವೈದ್ಯರು ಮುಂದುವರಿಯುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಜಯಾ–ಶಶಿಕಲಾ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು

ಜಯಲಲಿತಾ ಅವರ ವಿರುದ್ಧ ಶಶಿಕಲಾ ಮತ್ತು ಅವರ ಸಂಬಂಧಿಕರು ಷಡ್ಯಂತ್ರ ನಡೆಸಿದ್ದಾರೆ ಎಂಬ ವಿಷಯವನ್ನೂ ಆಯೋಗವು ಪರಿಶೀಲನೆಗೆ ಒಳಪಡಿಸಿದೆ.

‘ಬಲವಾದ ಅನುಮಾನದ ಕಾರಣ’ದಿಂದಲೇ ತಮ್ಮ ಪೋಯೆಸ್ ಗಾರ್ಡನ್‌ ನಿವಾಸದಿಂದ ಶಶಿಕಲಾ ಅವರನ್ನು ಜಯಲಲಿತಾ ಅವರು ಹೊರಗೆ ಹಾಕಿದ್ದರು (2011ರ ನವೆಂಬರ್‌ನಿಂದ 2012ರ ಮಾರ್ಚ್‌) ಎಂಬುದು ಬಹಳ ಸ್ಪಷ್ಟ. ರಾಜಕೀಯದಲ್ಲಿ ತಲೆ ಹಾಕುವುದಿಲ್ಲ ಎಂದು ಪತ್ರ ಬರೆದುಕೊಟ್ಟ ಬಳಿಕವಷ್ಟೇ ಶಶಿಕಲಾ ಅವರನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ. ಆದರೆ, ಅವರನ್ನು ‘ದೂರದಲ್ಲೇ’ ಇರಿಸಿದ್ದರು ಎಂದು ವರದಿಯು ಹೇಳಿದೆ.ಸಂಬಂಧವು ಕೆಟ್ಟು ಹೋದ ಕಾರಣಕ್ಕಾಗಿಯೇ ಶಶಿಕಲಾ ಮತ್ತು ಅವರ ಸಂಬಂಧಿಕರನ್ನು ಜಯಲಲಿತಾ ಅವರು ಪೋಯೆಸ್‌ ಗಾರ್ಡನ್‌ ನಿವಾಸದಿಂದ ಹೊರಗೆ ಹಾಕಿದ್ದರು ಎಂಬುದನ್ನು ಸಾಕ್ಷಿಗಳ ಹೇಳಿಕೆಯ ಆಧಾರದಲ್ಲಿ ‘ತೀರ್ಮಾನಿಸಬಹುದಾಗಿದೆ’ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.