ADVERTISEMENT

ಗಾಜಾ ಚಂಡಮಾರುತ ಪರಿಣಾಮ: ₹ 15 ಸಾವಿರ ಕೋಟಿ ಪರಿಹಾರ ಕೇಳಿದ ತಮಿಳುನಾಡು

ಏಜೆನ್ಸೀಸ್
Published 22 ನವೆಂಬರ್ 2018, 10:01 IST
Last Updated 22 ನವೆಂಬರ್ 2018, 10:01 IST
ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ
ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ   

ನವದೆಹಲಿ:ಗಾಜಾ ಚಂಡಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರವು ₹ 15 ಸಾವಿರ ಕೋಟಿ ವಿಪತ್ತು ಪರಿಹಾರ ನೀಡುವಂತೆತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಗುರುವಾರ ಮನವಿ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು,‘ಗಾಜಾ ಚಂಡಮಾರುತವು ತಮಿಳುನಾಡಿನಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಗಿದೆ.ಗಾಜಾದಿಂದಾದ ವಿನಾಶದ ಬಗ್ಗೆ ಈ ದಿನ (ಗುರುವಾರ) ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ವಿವರ ನೀಡಿದ್ದೇನೆ.ಜ್ಞಾಪನ ಪತ್ರವನ್ನೂ ಸಲ್ಲಿಸಿದ್ದೇನೆ. ಕೇಂದ್ರ ಸರ್ಕಾರದಿಂದ ₹ 15 ಸಾವಿರ ಕೋಟಿ ಪರಿಹಾರವನ್ನು ಕೇಳಿದ್ದೇವೆ. ಮಧ್ಯಂತರ ಪರಿಹಾರವಾಗಿ ₹ 1,500 ಕೋಟಿ ನೀಡುವಂತೆ ಕೋರಿದ್ದೇವೆ’ ಎಂದರು.

‘ರಾಜ್ಯದ ಒಟ್ಟು 12 ಜಿಲ್ಲೆಗಳಲ್ಲಿ ಚಂಡಮಾರುತವು ಹಾನಿಯನ್ನುಂಟು ಮಾಡಿದೆ. ಈ ವೇಳೆ ಒಟ್ಟು 63 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ನಿರ್ಮಿಸಲಾಗಿರುವ ಒಟ್ಟು 556 ಶಿಬಿರಗಳಲ್ಲಿ 3.75 ಲಕ್ಷ ಜನರುಆಶ್ರಯ ಪಡೆದಿದ್ದಾರೆ. ಚಂಡಮಾರುತದಿಂದ ಆಗಿರುವ ನಷ್ಟದ ಅಂದಾಜು ಮಾಪನ ಮಾಡಲು ಕೇಂದ್ರದ ತಂಡವನ್ನು ತಮಿಳುನಾಡಿಗೆ ನಿಯೋಜಿಸುವಂತೆ ಮನವಿ ಮಾಡಿದ್ದೇವೆ. ಪ್ರಧಾನಿಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಮುಖ್ಯಮಂತ್ರಿಯವರು ಸಂತ್ರಸ್ತರ ಭೇಟಿಗಾಗಿ ಹೆಚ್ಚು ಸಮಯ ನೀಡುತ್ತಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಬುಧವಾರ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅಪಾರ ವಿನಾಶ ಉಂಟಾಗಿರುವ, ರಸ್ತೆಗಳು ಹಾಳಾಗಿರುವ, ದೊಡ್ಡದೊಡ್ಡ ಮರಗಳು ಧರೆಗುರುಳಿ ಸಂಚಾರ ಬಂದ್‌ ಆಗಿರುವ ಎಷ್ಟು ಪ್ರದೇಶಗಳಿಗೆ ಸ್ಟಾಲಿನ್‌ ಭೇಟಿ ನೀಡಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಯವರು ಪ್ರವಾಹ ಪೀಡಿತ ಪ್ರದೇಶಗಳವೈಮಾನಿಕ ವೀಕ್ಷಣೆ ಮಾಡಿದ್ದ ಬಗ್ಗೆಯೂ ಕಟುವಾಗಿ ಮಾತನಾಡಿದ್ದ ಸ್ಟಾಲಿನ್‌ಗೆ, ‘ಒಂದು ವೇಳೆ ರಸ್ತೆ ಮಾರ್ಗವಾಗಿ ಸಾಗಿದರೆ ಚಂಡಮಾರುತದಿಂದ ಉಂಟಾಗಿರುವ ನಷ್ಟದ ಅಂದಾಜು ಮಾಡಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.

ಪ್ರವಾಹ ಪೀಡಿತ ಪುದುಕೋಟೈ ಹಾಗೂ ಇತರ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ಅವರೊಡನೆ ಮಂಗಳವಾರ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.