ADVERTISEMENT

ಒಟಿಟಿಯಲ್ಲಿ ನೀಲಿ ಚಿತ್ರವೂ ಪ್ರಸಾರ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 20:32 IST
Last Updated 4 ಮಾರ್ಚ್ 2021, 20:32 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಒಟಿಟಿ ವೇದಿಕೆಗಳ ಕೆಲವು ಕಾರ್ಯಕ್ರಮಗಳು ನೀಲಿ ಚಿತ್ರದಂತಿರುತ್ತವೆ (ಕಾಮಪ್ರಚೋದಕ ವಿಡಿಯೊ). ಹಾಗಾಗಿ, ಇಂತಹ ಕಾರ್ಯಕ್ರಮಗಳು ಪ್ರಸಾರವಾಗುವ ಮುನ್ನ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆ ಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರಅಭಿಪ್ರಾಯಪಟ್ಟಿದೆ.

ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಇತ್ತೀಚೆಗೆ ಪ್ರಕಟಿಸಲಾದ ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸುವಂತೆ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು. ಅಮೆಜಾನ್‌‍ಪ್ರೈಮ್‌ ವಿಡಿಯೊ ಭಾರತ ವಿಭಾಗದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ ಅವರ ಜಾಮೀನು ಅರ್ಜಿಯ ವಿಚಾರಣೆಯೂ ಶುಕ್ರವಾರ ನಡೆಯಲಿದೆ.

‘ತಾಂಡವ್‌’ ವೆಬ್‌ ಸರಣಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ತಳ್ಳಿ ಹಾಕಿತ್ತು. ಅದನ್ನು ಪ್ರಶ್ನಿಸಿ ಅಪರ್ಣಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಸಿನಿಮಾಗಳು ಮತ್ತು ಕಾರ್ಯಕ್ರಮಗಳ ಮೇಲೆ ಒಂದು ಮಟ್ಟಿನ ನಿಗಾ ಬೇಕು ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿಯೇ ನೀವು ಪ್ರಕಟಿಸಿರುವ ಮಾರ್ಗಸೂಚಿಗಳನ್ನು ನೋಡಬೇಕಿದೆ. ಅವರು (ಒಟಿಟಿ) ಏನು ತೋರಿಸುತ್ತಿದ್ದಾರೆ?ಕೆಲವೊಂದು ಸಿನಿಮಾಗಳು ನೀಲಿ ಚಿತ್ರಗಳಂತಿರುತ್ತವೆ. ಏನಾದರೊಂದು ನಿಯಂತ್ರಣ ಬೇಕು. ಸಮತೋಲನ ಇರಬೇಕು’ ಎಂದು ಪೀಠವು ಹೇಳಿದೆ.

ಇಂತಹ ವೇದಿಕೆಗಳಲ್ಲಿ ಕೊಳಕು ಮತ್ತು ನಿಂದನಾತ್ಮಕವಾದ ಕಾರ್ಯಕ್ರಮಗಳೂ ಪ್ರಸಾರವಾಗುತ್ತವೆ ಎಂದು ತುಷಾರ್‌ ಮೆಹ್ತಾ ಹೇಳಿದರು.

ಅಪರ್ಣಾ ಅವರ ವಿರುದ್ಧಅಲಹಾಬಾದ್‌ ಹೈಕೋರ್ಟ್‌ ನೀಡಿರುವ ಆದೇಶವು ಒಟಿಟಿ ನಿಯಂತ್ರಣ ಮಾರ್ಗಸೂಚಿ ಆಧಾರಿತ ಅಲ್ಲ. ಅಪರ್ಣಾ ಅವರದ್ದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ ಎಂದು ಅಪರ್ಣಾ ಪರ ವಕೀಲ ಮುಕುಲ್‌ ರೋಹಟಗಿ ವಾದಿಸಿದರು.

ತಾಂಡವ್‌ ವೆಬ್‌ ಸರಣಿಯ ನಟರು ಮತ್ತು ನಿರ್ಮಾಪಕರು ಮಧ್ಯಂತರ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊದಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗೆ ಹೋಗುವಂತೆ ಜನವರಿ 27ರಂದು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.