ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರೈತರೊಬ್ಬರ ಮಗನ ಸಾಧನೆಯು ಕೇಂದ್ರಾಡಳಿತ ಪ್ರದೇಶದಲ್ಲಿ ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿ ವ್ಯಾಪಿಸಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಭಾರತೀಯ ಆರ್ಥಿಕ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ ಕಾಶ್ಮೀರದ ಯುವಕ ತನ್ವೀರ್ ಅಹ್ಮದ್ ಖಾನ್ ಎರಡನೇ ರ್‍ಯಾಂಕ್ ಗಳಿಸಿದ್ದಾರೆ.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿಯೇ ಶಿಕ್ಷಣ ಪೂರೈಸಿರುವ ತ್ವನೀರ್, ಕಾಶ್ಮೀರ ಮಾತ್ರವಲ್ಲದೇ ಇಡೀ ದೇಶದ ಯುವಕರಿಗೆ ಪ್ರೇರಣೆಯಾಗಿ ಕಾಣುತ್ತಿದ್ದಾರೆ. ಐಇಎಸ್ 2020ರ ಪರೀಕ್ಷೆಯಲ್ಲಿ ತನ್ವೀರ್ ತೋರಿರುವ ಸಾಧನೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಚಳಿಗಾಲದಲ್ಲಿ ಕಾಶ್ಮೀರದಿಂದ ಕೋಲ್ಕತ್ತಗೆ ತೆರಳಿ ರಿಕ್ಷಾ ಎಳೆಯುವ ಕೆಲಸವನ್ನೂ ನಿರ್ವಹಿಸುತ್ತಿದ್ದ ತನ್ವೀರ್, ಕಠಿಣ ಶ್ರಮ ಮತ್ತು ಗುರಿಯತ್ತ ಗಮನವಿದ್ದರೆ ಯಾವುದೂ ಅಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕಾಶ್ಮೀರದ ನಿಗೀನ್‌ಪೊರ ಕುಂದ್ ಗ್ರಾಮದ ತನ್ವೀರ್, ಕುಂದ್‌ನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಾಲ್ಟಂಗೂನ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ರಜೂಲ್ ಕುಂದ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ಪೂರೈಸಿದರು. 2016ರಲ್ಲಿ ಅನಂತ್‌ನಾಗ್ ಸರ್ಕಾರಿ ಪದವಿ ಕಾಲೇಜಿನಿಂದ ಬಿಎ ಪದವಿ ಪಡೆದರು. ಬಾಲ್ಯದಿಂದಲೂ ಉತ್ತಮ ವಿದ್ಯಾರ್ಥಿಯಾಗಿರುವ ತನ್ವೀರ್, ಕಾಶ್ಮೀರ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ 3ನೇ ರ್‍ಯಾಂಕ್ ಪಡೆದು ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದರು.
ಛಲದ ಓದಿನ ಫಲವಾಗಿ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿರುವಾಗಲೇ ಜೂನಿಯರ್ ರಿಸರ್ಚ್ ಫೆಲೋಶಿಪ್‌ಗೆ (ಜೆಆರ್‌ಎಫ್) ಆಯ್ಕೆಯಾದರು. ಅನಂತರ ಕೋಲ್ಕತ್ತದ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್‌ನಿಂದ 2021ರ ಏಪ್ರಿಲ್‌ನಲ್ಲಿ ಎಂ.ಫಿಲ್ ಪೂರೈಸಿದರು.
ಪರೀಕ್ಷೆ ತಯಾರಿಯ ಬಗ್ಗೆ ಮಾತನಾಡಿರುವ ತನ್ವೀರ್, 'ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನಾನು ನನ್ನ ಕೋಣೆಯ ನಾಲ್ಕು ಗೋಡೆಗಳ ಮಧ್ಯೆ ಐಇಎಸ್ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಎಂ.ಫಿಲ್ ಓದಿನ ಜೊತೆಗೆ ಪರೀಕ್ಷೆ ತಯಾರಿಯೂ ಸಾಗಿತ್ತು. ನನ್ನ ಅಧ್ಯಯನಕ್ಕೆ ಕೋವಿಡ್ ಯಾವುದೇ ರೀತಿ ಪರಿಣಾಮ ಬೀರದಂತೆ ನಾನು ನಿಗಾವಹಿಸಿದೆ' ಎನ್ನುತ್ತಾರೆ.
ಪರೀಕ್ಷೆಗೆ ನನ್ನ ಮೊದಲ ಪ್ರಯತ್ನವೇ ಕೊನೆಯ ಪ್ರಯತ್ನ ಎಂಬಂತೆ ಕಠಿಣ ಪರಿಶ್ರಮ ವಹಿಸಿದೆ ಹಾಗೂ ಕೊನೆಗೆ ಗುರಿ ಸಾಧಿಸಿದೆ. ಕ್ರಮಿಸುವ ಹಾದಿ ಎಷ್ಟೇ ಕಠಿಣವಾಗಿದ್ದರೂ ಭರವಸೆಯನ್ನು ಮಾತ್ರ ಯಾವತ್ತಿಗೂ ಕಳೆದುಕೊಂಡಿರಲಿಲ್ಲ ಎನ್ನುತ್ತಾರೆ ತನ್ವೀರ್.
ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಗಾಗಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ, ಹಾಗೇ ಎಲ್ಲ ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ಕಡೆಗೆ ಗಮನ ಹರಿಸಬೇಕಿದೆ. ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಯುವಜನತೆ ಬುದ್ಧಿವಂತರು ಎಂದಿರುವ ತನ್ವೀರ್, ಯಾವುದೇ ಕ್ಷೇತ್ರದಲ್ಲಿ ಅವರು ಪರಿಣತಿ ಸಾಧಿಸುತ್ತಾರೆ. ಸಾಂಪ್ರದಾಯಿಕವಾದ ಆಯ್ಕೆಗಳನ್ನು ಹೊರತಾದ ಜೀವನ ಮಾರ್ಗದತ್ತ ಗಮನ ಹರಿಸಬೇಕು, ಯೋಚನೆಗಳನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.