ಮುಂಬೈ: ರತನ್ ಟಾಟಾ ಅವರು ತಾವು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಬೇಕು ಎಂದಿಕೊಂಡಿದ್ದರು. ಆದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಯ ಆರೈಕೆ ಮಾಡಬೇಕಾದ ಜವಾಬ್ದಾರಿ ಹಾಗೂ 1962ರಲ್ಲಿ ನಡೆದ ಭಾರತ–ಚೀನಾ ಯುದ್ಧದಿಂದಾಗಿ, ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬ ಅವರ ಕನಸು ಕನಸಾಗಿಯೇ ಉಳಿಯಿತು.
ಸಂಕೋಚ ಸ್ವಭಾವದ ಹಾಗೂ ಖಾಸಗಿತನವನ್ನು ಹೆಚ್ಚು ಇಷ್ಟಪಡುತ್ತಿದ್ದ ರತನ್ ಟಾಟಾ ಅವರು ಎಲ್ಲಿಯೂ ತಮ್ಮ ಮದುವೆ ವಿಚಾರವಾಗಿ ಮಾತನಾಡಿದ್ದಿಲ್ಲ. 2020ರಲ್ಲಿ, ವ್ಯಾಲೆಂಟೈನ್ ಡೇ ಅಂಗವಾಗಿ ಫೇಸ್‌ಬುಕ್‌ನಲ್ಲಿ ಈ ಕುರಿತು ವಿವರಿಸಿದ್ದರು.
‘ಕಾಲೇಜು ವ್ಯಾಸಂಗ ಮುಗಿದ ನಂತರ ನಾನು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆ ನಗರದ ವಾತಾವರಣ ಹಿತವಾಗಿತ್ತು. ಉದ್ಯೋಗವನ್ನೂ ಸಂಭ್ರಮಿಸಿದೆ. ಸ್ವಂತ ಕಾರೂ ಇತ್ತು. ಅಲ್ಲಿದ್ದಾಗಲೇ, ಯುವತಿಯೊಂದಿಗೆ ಪ್ರೇಮಾಂಕುರವಾಯಿತು. ಮದುವೆ ಮಾಡಿಕೊಳ್ಳಲೂ ನಿರ್ಧರಿಸಿದ್ದೆವು’ ಎಂದು ಟಾಟಾ ಬರೆದುಕೊಂಡಿದ್ದರು.
‘ಆದರೆ, ನನ್ನ ಅಜ್ಜಿಯ ಆರೋಗ್ಯ ತೀರ ಹದಗೆಟ್ಟ ಕಾರಣ ನಾನು ಮುಂಬೈಗೆ ಮರಳಬೇಕಾಯಿತು. ಏಳು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜಿಯ ಆರೈಕೆ ಮಾಡಲು ಈ ನಿರ್ಧಾರ ಕೈಗೊಂಡಿದ್ದೆ’.
‘ನಾನು ಪ್ರೀತಿಸುತ್ತಿರುವ ಯುವತಿ ಕೂಡ ಮದುವೆ ನಂತರ ಮುಂಬೈಗೆ ಬಂದು ನೆಲೆಸುತ್ತಾಳೆ ಅಂದುಕೊಂಡಿದ್ದೆ. ಆದರೆ, 1962ರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ ಶುರುವಾಯಿತು. ಇದೇ ಕಾರಣಕ್ಕೆ ಆಕೆಯ ಪಾಲಕರು ನಮ್ಮಿಬ್ಬರ ಮದುವೆಗೆ ಒಪ್ಪಿಗೆ ನೀಡದ ಕಾರಣ ನಮ್ಮ ಸಂಬಂಧ ಅಂದೇ ಕೊನೆಗೊಂಡಿತು’ ಎಂದೂ ಬರೆದುಕೊಂಡಿದ್ದರು.
‘ನನ್ನ ಬಾಲ್ಯ ಸಂತಸದಿಂದ ಕೂಡಿತ್ತು. ನಾನು ಮತ್ತು ಸಹೋದರ ದೊಡ್ಡವರಾದ ನಂತರ ಶಾಲೆಯಲ್ಲಿ ಮೂದಲಿಕೆಗಳನ್ನು ಎದುರಿಸಬೇಕಾಯಿತು. ನನ್ನ ತಂದೆ–ತಾಯಿ ವಿಚ್ಛೇದನ ಪಡೆದುಕೊಂಡಿದ್ದೇ ಅದಕ್ಕೆ ಕಾರಣ’ ಎಂದು ವಿವರಿಸಿದ್ದರು.
‘ಈಗ ವಿಚ್ಛೇದನ ಮಾಮೂಲಿ ಎಂಬಂತಾಗಿದೆ. ಆಗ ಪರಿಸ್ಥಿತಿ ಹೀಗಿರಲಿಲ್ಲ. ನನ್ನ ತಾಯಿ ಮರು ಮದುವೆಯಾದರು. ಈ ವಿಚಾರವಾಗಿ ನನ್ನ ಸಹಪಾಠಿಗಳು ಹಾಗೂ ಇತರರು ಶಾಲೆಯಲ್ಲಿ ನಮ್ಮ ಕುಟುಂಬದ ಬಗ್ಗೆ ಅಸಭ್ಯ ಮಾತುಗಳನ್ನಾಡುತ್ತಿದ್ದರು. ಆದರೆ, ಎಂಥದೇ ಪರಿಸ್ಥಿತಿ ಎದುರಾದರೂ ಘನತೆಯಿಂದ ಹೇಗೆ ಬದುಕಬೇಕು ಎಂಬುದನ್ನು ಅಜ್ಜಿ ನಮಗೆ ಹೇಳಿಕೊಟ್ಟರು’ ಎಂದೂ ರತನ್ ಟಾಟಾ ವಿವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.