ಮುಂಬೈ: ಮಹಾರಾಷ್ಟ್ರದ ರಾಯಗಡ ಕರಾವಳಿಯ ವಿವಿಧ ಭಾಗಗಳಲ್ಲಿ ಎಂಟು ಮೃತದೇಹಗಳುಒಂದೆರಡು ದಿನಗಳಲ್ಲಿ ಪತ್ತೆಯಾಗಿವೆ. ಗುಜರಾತ್‌ನ ವಲ್ಸದ್ ಜಿಲ್ಲೆಯ ಕರಾವಳಿಯಲ್ಲಿಯೂ ಎರಡು ಮೃತದೇಹಗಳು ಭಾನುವಾರ ಸಿಕ್ಕಿವೆ.
ತೌತೆ ಚಂಡಮಾರುತದ ಸಂದರ್ಭದಲ್ಲಿ ಮುಂಬೈ ಕರಾವಳಿಯಲ್ಲಿ ಮುಳುಗಡೆಯಾದ ಪಿ305 ಬಾರ್ಜ್‌ನಿಂದ ನಾಪತ್ತೆಯಾದವರ ದೇಹಗಳು ಇವು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಶನಿವಾರ ಸಂಜೆಯ ಬಳಿಕ ವಲ್ಸದ್ ಜಿಲ್ಲೆಯ ಕರಾವಳಿಯಲ್ಲಿ ಒಟ್ಟು ಆರು ಮೃತದೇಹಗಳು ಸಿಕ್ಕಿವೆ.
ಶನಿವಾರ ಸಿಕ್ಕ ನಾಲ್ಕು ದೇಹಗಳ ಪೈಕಿ ಮೂರು ತಿಥಲ್ ಕಿನಾರೆಯಲ್ಲಿ ಮತ್ತು ಇನ್ನೊಂದು ದೇಹವು ಡುಂಗ್ರಿ ಗ್ರಾಮದ ಸಮೀಪದ ಕರಾವಳಿಯಲ್ಲಿ ಸಿಕ್ಕಿವೆ ಎಂದು ವಲ್ಸದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜದೀಪ್‌ಸಿಂಹ ಝಾಲಾ ತಿಳಿಸಿದ್ದಾರೆ. ಭಾನುವಾರ ಸಿಕ್ಕ ಎರಡೂ ದೇಹಗಳು ತಿಥಲ್ ಕಿನಾರೆಯಲ್ಲಿಯೇ ಪತ್ತೆಯಾದವು.
ಇವರ ಗುರುತಿನ ಚೀಟಿ ಮತ್ತು ಇತರ ಕೆಲವು ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ. ತನಿಖೆ ಮುಂದುವರಿದಿದೆ. ಅವರ ಸಮವಸ್ತ್ರ, ಅವರು ತೊಟ್ಟಿದ್ದ ಜೀವ ರಕ್ಷಕ ಕವಚಗಳನ್ನು ಗಮನಿಸಿದರೆ ಇವರೆಲ್ಲರೂ ಬಾರ್ಜ್‌ನಿಂದ ನಾಪತ್ತೆಯಾದವರು ಎಂಬುದನ್ನು ಸೂಚಿಸುತ್ತದೆ ಎಂದು ಝಾಲಾ ತಿಳಿಸಿದ್ದಾರೆ.
ಬಾರ್ಜ್ ಮುಳುಗುವ ಸಂದರ್ಭದಲ್ಲಿ ಅದರಲ್ಲಿ 261 ಜನರು ಇದ್ದರು. ಅವರ ಪೈಕಿ 186 ಮಂದಿಯನ್ನು ರಕ್ಷಿಸಲಾಗಿದೆ. 66 ಮೃತದೇಹಗಳು ಪತ್ತೆಯಾಗಿವೆ. ಒಂಬತ್ತು ಮಂದಿಗಾಗಿ ಶೋಧ ಮುಂದುವರಿದಿದೆ.ಆ್ಯಂಕರ್ ನಿರ್ವಹಣಾ ದೋಣಿ ವರಪ್ರದಾದಲ್ಲಿ ಇದ್ದ 11 ಮಂದಿಯೂ ನಾಪತ್ತೆಯಾಗಿದ್ದಾರೆ.
ವಿವಿಧ ಸಂಸ್ಥೆಗಳಿಗೆ ಮಾನವ ಹಕ್ಕು ಆಯೋಗದ ನೋಟಿಸ್
ಬಾರ್ಜ್ ಮುಳುಗಡೆಗೆ ಸಂಬಂಧಿಸಿ ವರದಿ ನೀಡುವಂತೆ ಸಂಬಂಧಪಟ್ಟ ವಿವಿಧ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ನೋಟಿಸ್ ನೀಡಿದೆ. ತೌತೆ ಚಂಡಮಾರುತದಿಂದ ಆಪಾಯ ಇದೆ ಎಂಬುದು ತಿಳಿದಿದ್ದರೂ ಬಾರ್ಜ್‌ನಲ್ಲಿದ್ದವರನ್ನು ರಕ್ಷಿಸುವ ಕೆಲಸ ಆಗಿಲ್ಲ ಎಂದು ಆಯೋಗವು ಅಸಮಾಧಾನ ವ್ಯಕ್ತಪಡಿಸಿದೆ.
ಚಂಡಮಾರುತ ಸೃಷ್ಟಿಯಾಗುತ್ತಿದ್ದ ಮತ್ತು ನಂತರದ ಅವಧಿಯಲ್ಲಿ ಎಲ್ಲ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದರೆ ಜೀವಹಾನಿಯನ್ನು ತಡೆಯುವ ಎಲ್ಲ ಅವಕಾಶಗಳೂ ಇದ್ದವು ಎಂದು ಆಯೋಗವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.