ADVERTISEMENT

ಭ್ರಷ್ಟಾಚಾರ ಪ್ರಕರಣ: ಚಂದ್ರಬಾಬು ಅವರನ್ನು ನ್ಯಾಯಾಲಯಕ್ಕೆ ಹಾಜರು ‍ಪಡಿಸಿದ ಸಿಐಡಿ

ಪಿಟಿಐ
Published 10 ಸೆಪ್ಟೆಂಬರ್ 2023, 2:38 IST
Last Updated 10 ಸೆಪ್ಟೆಂಬರ್ 2023, 2:38 IST
ಎನ್‌. ಚಂದ್ರಬಾಬು ನಾಯ್ಡು
ಎನ್‌. ಚಂದ್ರಬಾಬು ನಾಯ್ಡು   

ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್‌. ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದು, ಇಂದು (ಭಾನುವಾರ) ಬೆಳಿಗ್ಗೆ ಬಿಗಿ ಭದ್ರತೆಯೊಂದಿಗೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಚಂದ್ರಬಾಬು ನಾಯ್ಡು ಪರವಾಗಿ ಸುಪ್ರೀಂ ಕೋರ್ಟ್‌ ವಕೀಲ ಸಿದ್ದಾರ್ಥ್‌ ಲೂಥ್ರಾ ಹಾಗೂ ವಕೀಲರ ತಂಡ ವಾದ ಮಂಡಿಸಲಿದೆ. ನ್ಯಾಯಾಲಯದ ಸಂಕೀರ್ಣದಲ್ಲಿ ಟಿಡಿಪಿಯ ಹಲವು ಹಿರಿಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದಾರೆ.

ಕುಂಚನಪಲ್ಲಿಯಲ್ಲಿರುವ ಸಿಐಡಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಯಲ್ಲಿ ಸುದೀರ್ಘ 10 ಗಂಟೆಗಳ ವಿಚಾರಣೆ ನಡೆಸಿದ ನಂತರ ಚಂದ್ರಬಾಬು ನಾಯ್ಡು ಅವರನ್ನು ನಸುಕಿನ ವೇಳೆ 3.40 ಗಂಟೆ ಸುಮಾರಿಗೆ ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡದ ಸರ್ಕಾರಿ ಜನರಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ADVERTISEMENT

ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಹಗರಣದಿಂದ ರಾಜ್ಯದ (ಆಂಧ್ರಪ್ರದೇಶ) ಬೊಕ್ಕಸಕ್ಕೆ ₹300 ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

ನಾಯ್ಡು ಅವರ ಬಂಧನವನ್ನು ವಿರೋಧಿಸಿ ಇಂದು (ಭಾನುವಾರ) ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನದ ಉಪವಾಸದಲ್ಲಿ ಪಾಲ್ಗೊಳ್ಳುವಂತೆ ಟಿಡಿಪಿ ತನ್ನ ಬೆಂಬಲಿಗರಿಗೆ ಕರೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.