ಅಮರಾವತಿ: ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯನ್ನು ಇಂದು (ಶನಿವಾರ) ನೆಲಸಮಗೊಳಿಸಲಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ 'ಎನ್‌ಎನ್‌ಐ' ವರದಿ ಮಾಡಿದೆ.
ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಪಿ–ಸಿಆರ್‌ಡಿಎ) ಹಾಗೂ ಮಂಗಲಗಿರಿ ತಡೆಪಲ್ಲಿ ನಗರ ಪಾಲಿಕೆ (ಎಂಟಿಎಂಸಿ) ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮುಂಜಾನೆಯೇ ಕಟ್ಟಡ ನೆಲಸಮಗೊಳಿಸಿದ್ದಾರೆ.
ಈ ಸಂಬಂಧ ಸರ್ಕಾರದ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್ ಗುಡುಗಿದೆ. 'ತೆಲುಗು ದೇಶಂ ಪಕ್ಷವು (ಟಿಡಿಪಿ) ಸೇಡಿನ ರಾಜಕಾರಣ ಮಾಡುತ್ತಿದೆ. ಎಪಿ–ಸಿಆರ್‌ಡಿಎ ಕ್ರಮವನ್ನು ಪ್ರಶ್ನಿಸಿ ನಮ್ಮ ಪಕ್ಷವು ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯವು ನೆಲಸಮ ಪ್ರಕ್ರಿಯೆ ನಿಲ್ಲಿಸುವಂತೆ ಆದೇಶಿಸಿದೆ. ಆದಾಗ್ಯೂ, ಕಟ್ಟಡ ಧ್ವಂಸಗೊಳಿಸಲಾಗಿದೆ' ಎಂದು ಕಿಡಿಕಾರಿದೆ.
ವೈಎಸ್‌ಆರ್ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಚಂದ್ರಬಾಬು ಅವರು ದ್ವೇಷ ರಾಜಕೀಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಸರ್ವಾಧಿಕಾರಿಯಂತೆ, ಬುಲ್ಡೋಜರ್‌ಗಳನ್ನು ಬಳಸಿ ವೈಎಸ್‌ಆರ್‌ಸಿಪಿ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ' ಎಂದು ಎಕ್ಸ್/ಟ್ವಿಟರ್ ಮೂಲಕ ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.