ಅಮರಾವತಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲ್ದುರ್ತಿ ಮಂಡಲದಲ್ಲಿ ಟಿಡಿಪಿ ನಾಯಕ ಗೌರಿನಾಥ್ ಚೌಧರಿ ಅವರನ್ನು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಬೊಮ್ಮಿರೆಡ್ಡಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಗೌರಿನಾಥ್ ಚೌಧರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನೂಲ್ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಕರ್ನೂಲ್ ಜಿಲ್ಲೆಯ ಪ್ರಮುಖ ಟಿಡಿಪಿ ನಾಯಕರಾಗಿದ್ದ ಗೌರಿನಾಥ್ ಚೌಧರಿ ಅವರನ್ನು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪತ್ತಿಕೊಂಡ ಡಿಎಸ್‌ಪಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭಾ ಚುನಾವಣೆಯ ಜೊತೆಯಲ್ಲೇ ವಿಧಾನಸಭೆಗೂ ಮತದಾನ ನಡೆದಿತ್ತು. ಇದೇ ವೇಳೆ ಪಲ್ನಾಡು, ಕಡಪ, ವೇಮೂರು ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿತ್ತು. ಹಿಂಸಾಚಾರಕ್ಕೆ ಕಾರಣರು ಯಾರು ಎಂಬ ವಿಚಾರವಾಗಿ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವೆ ಆರೋಪ–ಪ್ರತ್ಯಾರೋಪ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.