ಹೈದರಾಬಾದ್: ಆಂಧ್ರಪ್ರದೇಶದ ಪೊಲೀಸರ ಕಾರ್ಯವೈಖರಿ ಕುರಿತು ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಕ್ಷೇತ್ರ ಪೀಠಾಪುರಂಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೃಹ ಸಚಿವೆ ವೆಂಗಲಪುಡಿ ಅನಿತಾ ಅವರ ವಿರುದ್ಧ ಮಾತನಾಡಿರುವ ಅವರು, ‘ಗೃಹ ಇಲಾಖೆ ವಹಿಸಿಕೊಂಡಿದ್ದೀರಿ ಎಂದಾದರೆ ಅದನ್ನು ಭಿನ್ನವಾಗಿಯೇ ನಿರ್ವಹಿಸಬೇಕು. ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವವರು ಯಾರು? ಒಂದೊಮ್ಮೆ ನಾನೇ ಗೃಹ ಸಚಿವನಾಗಿದ್ದರೆ, ಅದರ ಕಥೆಯೇ ಬೇರೆಯಾಗಿರುತ್ತಿತ್ತು’ ಎಂದಿದ್ದಾರೆ.
‘ನಾನು ಕೇವಲ ಪಂಚಾಯತ್ ರಾಜ್ ಸಚಿವ. ಗೃಹ ಸಚಿವೆಯಾಗಿ ನಿಮ್ಮ ಕೆಲವನ್ನು ಸರಿಯಾಗಿ ಮಾಡಿ ಎಂದಷ್ಟೇ ಹೇಳುತ್ತಿದ್ದೇನೆ. ಒಂದೊಮ್ಮೆ ನಿಮ್ಮ ಕೆಲಸ ತೃಪ್ತಿದಾಯಕವಾಗಿಲ್ಲ ಎಂದಾದರೆ, ನಾನೇ ಗೃಹ ಖಾತೆ ವಹಿಸಿಕೊಳ್ಳುವ ದಿನಗಳು ಬರಲಿವೆ’ ಎಂದು ಗುಡುಗಿದ್ದಾರೆ.
‘ಅಪರಾಧ ಕೃತ್ಯ ಎಸಗುವವರಿಗೆ ಜಾತಿ, ಧರ್ಮ, ಪಂಥ ಇರುವುದಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರಂತೆಯೇ ಅರಬ್ ರಾಷ್ಟ್ರಗಳು ಹಾಗೂ ಸಿಂಗಪೂರದಲ್ಲಿರುವ ಕಠಿಣಾತಿ ಕಠಿಣ ಶಿಕ್ಷೆ ವಿಧಿಸುವುದನ್ನು ಜಾರಿಗೆ ತರಬೇಕು’ ಎಂದು ಪ್ರತಿಪಾದಿಸಿದ್ದಾರೆ.
‘ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿದ್ದ ವೈಎಸ್‌ಆರ್‌ಸಿಪಿ ಅಧಿಕಾರಾವಧಿಯಲ್ಲಿ ವಂಶಾಡಳಿತ ಹಾಗೂ ದೋಷಪೂರಿತ ನೀತಿಗಳಿಂದಾಗಿ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ. ಇದನ್ನು ಬದಲಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಅವರು ವೈಎಸ್‌ಆರ್‌ಸಿಪಿ ಕಾಲಾವಧಿಯಿಂದ ಹೊರಗೆ ಬರಬೇಕು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದು ಪವನ್ ಕಲ್ಯಾಣ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.